Rishabh Pant car accident: ಡೆಹರಾಡೂನ್‌ನಿಂದ ಪಂತ್ ಮುಂಬೈಗೆ ಶಿಫ್ಟ್; ವಿದೇಶದಲ್ಲಿ ಚಿಕಿತ್ಸೆಗೆ ಚಿಂತನೆ?
ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಮುಂಬೈಗೆ ಏರ್‌ಲಿಫ್ಟ್
ಅಪಘಾತದಿಂದ ಡೆಹರಾಡೂನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್
ಬಿಸಿಸಿಐ ತಜ್ಞ ವೈದ್ಯರ ಸಲಹೆ ಮೇರೆಗೆ ಪಂತ್ ಅವರನ್ನು ಮುಂಬೈಗೆ ಶಿಫ್ಟ್
ಡೆಹರಾಡೂನ್(ಜ.04): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಡೆಹರಾಡೂನ್‌ನಿಂದ ಮುಂಬೈಗೆ ಸ್ಥಳಾಂತರ ಮಾಡಿದೆ. ಕಾರು ಅಪಘಾತದಿಂದ ಬಹು ಅಂಗಾಂಗ ಗಾಯಕ್ಕೊಳಗಾಗಿರುವ ರಿಷಭ್ ಪಂತ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದಾಗಿ ಬಿಸಿಸಿಐ ಇದೀಗ ಮಹತ್ತರ ತೀರ್ಮಾನ ತೆಗೆದುಕೊಂಡಿದೆ.
ಡಿಸೆಂಬರ್ 30ರಂದು ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ರಿಷಭ್ ಪಂತ್ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ರಿಷಭ್ ಪಂತ್ ಅವರು ಲಿಗಮೆಂಟ್ ಸರ್ಜರಿಗೆ ಒಳಗಾಗುವ ಸಾಧ್ಯತೆಯಿದೆ. ಇದುವರೆಗೂ ರಿಷಭ್ ಪಂತ್, ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಪಂತ್ ಅವರನ್ನು ಡೆಹರಾಡೂನ್‌ನಿಂದ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ.
ಸದ್ಯ ರಿಷಭ್ ಪಂತ್ ಅವರಿಗೆ ಆಗಿರುವ ಗಾಯದ ವರದಿಗಳನ್ನು ಬಿಸಿಸಿಐ ತಜ್ಞ ವೈದ್ಯಕೀಯ ಸಿಬ್ಬಂದಿಗಳು ಅವಲೋಕಿಸುತ್ತಿದ್ದು, ಒಂದು ವೇಳೆ ಇನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದರೇ, ವಿದೇಶಕ್ಕೆ ಅದರಲ್ಲೂ ಮುಖ್ಯವಾಗಿ ಲಂಡನ್‌ಗೆ ಪಂತ್ ಅವರನ್ನು ಚಿಕಿತ್ಸೆಗೆ ಕಳಿಸಿಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಬಿಸಿಸಿಐ, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಪ್ರಖ್ಯಾತ ಆರ್ಥೋ(ಮೂಳೆ ತಜ್ಞ) ವೈದ್ಯರಾದ ದಿನ್‌ಶಾ ಪರಡಿವಾಲಾ ಅವರ ಬಳಿ ಚಿಕಿತ್ಸೆ ಕೊಡಿಸಲು ಮುಂದಾಗಿದೆ. ಮುಂಬೈನ ಪ್ರಖ್ಯಾತ ಮೂಳೆ ತಜ್ಞರಾದ ಡಾ. ದಿನ್‌ಶಾ ಪರಡಿವಾಲಾ ಈಗಾಗಲೇ ಸಾಕಷ್ಟು ದಿಗ್ಗಜ ಕ್ರೀಡಾಪಟುಗಳಿಗೆ ಉತ್ತಮವಾದ ಚಿಕಿತ್ಸೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಡಾ. ದಿನ್‌ಶಾ ಪರಡಿವಾಲಾ ಆರ್ಥೋ ಹಾಗೂ ಕ್ರೀಡಾ ವೈದ್ಯರ ವಿಭಾಗದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.
ಅಷ್ಟಕ್ಕೂ ರಿಷಭ್ ಪಂತ್ ಕಾರು ಅಪಘಾತ ಹೇಗಾಯ್ತು?
ಗುರುವಾರ ರಾತ್ರಿ ರಿಷಭ್ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ರಿಷಭ್ ಪಂತ್ ಅವರಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ರಿಷಭ್ ಪಂತ್ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಹುದೊಡ್ಡ ಅಪಾಯದಿಂದ ಪಾರಾಗಿದ್ದರು. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರು.
ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್ ವಾರ್ಡ್‌ಗೆ ಶಿಫ್ಟ್..!
ಅತಿವೇಗದ ಚಾಲನೆ, ನಿದ್ದೆ; ಸೀಟ್‌ಬೆಲ್ಟ್ ಕೂಡಾ ಇಲ್ಲ!
ಮೆರ್ಸಿಡಿಸ್ ಕಂಪನಿಯ ದುಬಾರಿ ಕಾರಿನಲ್ಲಿ ತೆರಳುತ್ತಿದ್ದ ರಿಷಭ್ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದರು. ಕಾರಿನಲ್ಲಿ ಒಬ್ಬರೇ ಇದ್ದಿದ್ದು, ಚಾಲನೆ ವೇಳೆ ನಿದ್ದೆಯ ಮಂಪರಿನಲ್ಲಿ ತೂಕಡಿಸಿದ್ದಾರೆ. ಹೀಗಾಗಿ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಹರಿದ್ವಾರ ನಗರ ಎಸ್‌ಪಿ ಎಸ್‌ಕೆ ಸಿಂಗ್ ತಿಳಿಸಿದ್ದರು. ಪಂತ್ ಕಾರನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಅಪಘಾತದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಕೆಲ ಮೀಟರ್ ದೂರಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ರಿಷಭ್ ಕಾರು ಚಾಲನೆ ವೇಳೆ ಸೀಟ್‌ಬೆಲ್ಟ್ ಕೂಡಾ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.
ನೆರವಿಗೆ ಧಾವಿಸಿದ ಬಸ್ ಚಾಲಕ
ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ರಿಷಭ್‌ರ ಸಹಾಯಕ್ಕೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಚಾಲಕ ಧಾವಿಸಿದ್ದರು. ರಸ್ತೆಯ ಪಕ್ಕದಲ್ಲೇ ರಿಷಭ್‌ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಮೊದಲು ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು.