ಮುಂಬೈ(ಡಿ.13): ಟೀಂ ಇಂಡಿಯಾದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ತಮ್ಮ ಪುತ್ರ ಅಗಸ್ತ್ಯಗೆ ಫೀಡಿಂಗ್‌ ಬಾಟಲ್‌ ಮೂಲಕ ಹಾಲುಣಿಸುತ್ತಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಫೋಟೋ ವೈರಲ್‌ ಆಗಿದೆ. 

‘ರಾಷ್ಟ್ರೀಯ ಕೆಲಸ ಮುಗಿಯಿತು, ಈಗ ತಂದೆಯ ಕೆಲಸ’ ಎಂದು ಶೀರ್ಷಿಕೆಯೊಂದಿಗೆ ಹಾಕಿರುವ ಫೋಟೋಗೆ ಕೇವಲ 2 ಗಂಟೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಹಾರ್ದಿಕ್ ಪಾಂಡ್ಯ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಕೂಡಿಕೊಂಡಿದ್ದರು.ಮುಂಬೈ ಇಂಡಿಯನ್ಸ್‌ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಹಾರ್ದಿಕ್ ಪಾಂಡ್ಯ, ಆ ಬಳಿಕ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲೂ ತಮ್ಮ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸರಣಿ ಶ್ರೇಷ್ಠ ಟ್ರೋಫಿಯನ್ನು ನಟರಾಜನ್‌ಗೆ ಕೊಟ್ಟ ಹಾರ್ದಿಕ್ ಪಾಂಡ್ಯ..!

ಹಾರ್ದಿಕ್ ಪಾಂಡ್ಯ 2020ರ ಜುಲೈ 30ರಂದು ತಂದೆಯಾಗಿದ್ದರು. ಇದಾಗಿ ಕೆಲವೇ ದಿನಗಳ ಬಳಿಕ 13ನೇ ಆವೃತ್ತಿಯ ಐಪಿಎಲ್‌ ಆಡಲು ಮುಂಬೈ ಇಂಡಿಯನ್ಸ್‌ ತಂಡದೊಟ್ಟಿಗೆ ಹಾರ್ದಿಕ್ ಪಾಂಡ್ಯ ಯುಎಇಗೆ ತೆರಳಿದ್ದರು. ಅಲ್ಲಿ ಸುಮಾರು 2 ತಿಂಗಳಿಗೂ ಹೆಚ್ಚು ಕಾಲ ಬಯೋಬಬಲ್ ವಾತಾವರಣದಲ್ಲಿದ್ದು, ಬಳಿಕ ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾ ವಿರುದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯಾಡಲು ಕಾಂಗರೂ ನಾಡಿಗೆ ಬಂದಿಳಿದಿದ್ದರು.

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ 105ರ ಸರಾಸರಿಯಲ್ಲಿ 210 ರನ್ ಬಾರಿಸುವ ಮೂಲಕ ಭಾರತ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇನ್ನು ಟಿ20 ಸರಣಿಯ ಟೀಂ ಇಂಡಿಯಾ ಗೆಲುವಿನಲ್ಲಿ ಪಾಂಡ್ಯ ಮಹತ್ವದ ಪಾತ್ರ ನಿಭಾಯಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ ತಮಗೆ ಒಲಿದು ಬಂದಿದ್ದ ಈ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟಿ. ನಟರಾಜನ್‌ಗೆ ನೀಡಿದ್ದರು.