ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್‌ಅಮಿತ್ ಶಾ ಭೇಟಿಯಾಗಿದ್ದು ನಮ್ಮ ಸೌಭಾಗ್ಯವೆಂದ ಹಾರ್ದಿಕ್ ಪಾಂಡ್ಯರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಪಾಂಡ್ಯ ಬ್ರದರ್ಸ್?

ಅಹಮದಾಬಾದ್(ಡಿ.31): ಭಾರತ ಕ್ರಿಕೆಟ್ ತಂಡದ ತಾರಾ ಕ್ರಿಕೆಟ್ ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ, ನವದೆಹಲಿಯಲ್ಲಿ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ಹಾರ್ದಿಕ್ ಪಾಂಡ್ಯ ಬಹಿರಂಗ ಪಡಿಸಿದ್ದು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಅಮೂಲ್ಯ ಸಮಯವನ್ನು ನಮ್ಮ ಕಳೆದಿದ್ದಕ್ಕೆ ಹಾರ್ದಿಕ್‌ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದು, ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ನಮ್ಮ ಪಾಲಿನ ಸೌಭಾಗ್ಯ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ, ಮುಂಬರುವ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಲಿದ್ದಾರೆ. ಇದಷ್ಟೇ ಅಲ್ಲದೇ ಸದ್ಯದಲ್ಲೇ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಟಿ20 ತಂಡದ ಪೂರ್ಣಪ್ರಮಾಣದ ನಾಯಕನಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪಾಂಡ್ಯ ಬ್ರದರ್ಸ್‌ ಹಾಗೂ ಅಮಿತ್ ಶಾ ಎಲ್ಲರೂ ಗುಜರಾತ್ ಮೂಲದವರಾಗಿರುವುದರಿಂದ, ಈ ಭೇಟಿ ಸಾಕಷ್ಟು ಕುತೂಹಲವನ್ನು ಪಡೆದುಕೊಂಡಿದೆ. ಇನ್ನೂ ಕೆಲವು ಫ್ಯಾನ್ಸ್‌, ಪಾಂಡ್ಯ ಬ್ರದರ್ಸ್‌ ರಾಜಕೀಯಕ್ಕೆ ಎಂಟ್ರಿಕೊಡುತ್ತಾರಾ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಅಮಿತ್‌ ಶಾ ಭೇಟಿಯ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, "ನಮ್ಮನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ, ನಮ್ಮೊಟ್ಟಿಗೆ ಅಮೂಲ್ಯ ಕ್ಷಣಗಳನ್ನು ಕಳೆದ ಗೃಹಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ನಮ್ಮ ಸೌಭಾಗ್ಯ ಹಾಗೂ ಗೌರವದ ವಿಚಾರ ಎಂದು ಬರೆದುಕೊಂಡಿದ್ದಾರೆ.

View post on Instagram

ಈ ಮೊದಲು ಡಿಸೆಂಬರ್ 29ರಂದು ಹಾರ್ದಿಕ್‌ ಪಾಂಡ್ಯ, ರಾಕಿಂಗ್‌ ಸ್ಟಾರ್ ಯಶ್ ಅವರನ್ನು ಭೇಟಿಯಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. KGF ಸಿನಿಮಾ ಮೂಲಕ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕೆಜಿಎಫ್‌ ಸ್ಟಾರ್ ಯಶ್ ಅವರನ್ನು ತಬ್ಬಿ ಹಿಡಿದುಕೊಂಡಿರುವ ಫೋಟೋವನ್ನು ಹಾರ್ದಿಕ್ ಪಾಂಡ್ಯ ಶೇರ್‌ ಮಾಡಿಕೊಂಡಿದ್ದರು.

KGF ಸ್ಟಾರ್ ಯಶ್ ಜೊತೆ ಪಾಂಡ್ಯ ಬ್ರದರ್ಸ್, ಕೆಜಿಎಫ್ 3 ಎಂದ ಕ್ರಿಕೆಟರ್ಸ್!

View post on Instagram

ಹಾರ್ದಿಕ್ ಪಾಂಡ್ಯ ಅವರನ್ನು ಟೀಂ ಇಂಡಿಯಾ ಟಿ20 ತಂಡದ ಭವಿಷ್ಯದ ನಾಯಕ ಎಂದು ಬಿಂಬಿಸಲಾಗುತ್ತಿದ್ದು, ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ, ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಲಂಕಾ ಎದುರಿನ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ನೇಮಕವಾಗಿರುವ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ಬರುವಂತೆ ಮಾಡಿದೆ. ಜನವರಿ 03ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಗೆ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ಹಾರ್ದಿಕ್ ಪಾಂಡ್ಯ ನಾಯಕನಾಗಿ ನೇಮಕವಾಗಿದ್ದು, ಮುಂಬೈ ಮೂಲದ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಉಪನಾಯಕರಾಗಿ ನೇಮಕವಾಗಿದ್ದಾರೆ.

ಇನ್ನು ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಮೈದಾನದಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬರೋಡ ತಂಡದ ಪರ ಕಣಕ್ಕಿಳಿದಿದ್ದರು. ಕೃನಾಲ್ ಪಾಂಡ್ಯ ಇದುವರೆಗೂ ಭಾರತ ಪರ 5 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 254 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ 17 ವಿಕೆಟ್ ಕಬಳಿಸಿದ್ದಾರೆ.