* ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡ ವೇಗಿ ಭುವನೇಶ್ವರ್ ಕುಮಾರ್* ಕಳೆದ ನವೆಂಬರ್ 24ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದ ಭುವಿ ಪತ್ನಿ* ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದ ಭುವಿ
ಬೆಂಗಳೂರು(ಡಿ.20): ಟೀಂ ಇಂಡಿಯಾ (Team India) ಅನುಭವಿ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ತಮ್ಮ ಅಭಿಮಾನಿಗಳಿಗೆ ಭಾನುವಾರ(ಡ.19) ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ (Instagram) ಗುಡ್ ನ್ಯೂಸ್ ನೀಡಿದ್ದು, ತಮ್ಮ ಹೆಣ್ಣು ಮಗುವಿನ ಫೋಟೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ ಕಳೆದ ನವೆಂಬರ್ 24ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದಾಗಿ ಬರೋಬ್ಬರಿ ನಾಲ್ಕು ವಾರಗಳ ಬಳಿಕ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಇದೇ ಮೊದಲ ಬಾರಿಗೆ ಮೊದಲ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಭುವಿ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದರೂ ಸಹಾ, ಮಗಳಿಗೆ ಹೆಸರಿಟ್ಟಿರುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಭುವನೇಶ್ವರ್ ಕುಮಾರ್ ಹಾಗೂ ನೂಪುರ್ ತಮ್ಮ ಮಗುವನ್ನು ಒಟ್ಟಾಗಿ ಹಿಡಿದುಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾ ಸಹ ಆಟಗಾರರಾದ ಸುರೇಶ್ ರೈನಾ (Suresh Raina), ಕರ್ಣ್ ಶರ್ಮಾ ಹಾಗೂ ಈಶ್ವರ್ ಪಾಂಡೆ ಸೇರಿದಂತೆ ಹಲವು ಕ್ರಿಕೆಟಿಗರು ಭುವಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಕಡೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ, ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿರುವ ಭುವಿ, ಈ ಮೊದಲು ಹೊಂದಿದ್ದ ಮೊನಚಿನ ದಾಳಿ ನಡೆಸಲು ವಿಫಲರಾಗುತ್ತಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಭುವನೇಶ್ವರ್ ಕುಮಾರ್ ಫಿಟ್ನೆಸ್ ಸಮಸ್ಯೆಯಿಂದಾಗಿ ಭಾರತ ತಂಡದಲ್ಲಿ ನೆಲೆ ಕಂಡುಕೊಳ್ಳಲು ಹೋರಾಡುತ್ತಿದ್ದಾರೆ.
Ashes 2021: ಕೊನೆಯ ಮೂರು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ..!
ಇನ್ನು ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲೂ ಭುವನೇಶ್ವರ್ ಕುಮಾರ್, ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರು. ಬಳಿಕ ಟಿ20 ವಿಶ್ವಕಪ್ ಟೂರ್ನಿಯ ಆಡುವ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಭುವಿ ಆಯ್ಕೆಯಾಗಿಲ್ಲ.
IPL Auction 2022: ಪಾಕೆಟ್ ಡೈನಮೊ ನಿಕೋಲಸ್ ಪೂರನ್ ಮೇಲೆ ಕಣ್ಣಿಟ್ಟಿವೆ ಈ ನಾಲ್ಕು ಫ್ರಾಂಚೈಸಿಗಳು..!
ಭುವನೇಶ್ವರ್ ಕುಮಾರ್ ಸುಮಾರು ನಾಲ್ಕು ವರ್ಷಗಳ ಹಿಂದೆ ಕಡೆಯ ಬಾರಿಗೆ ಭಾರತ ತಂಡದ ಪರ ಟೆಸ್ಟ್ ಪಂದ್ಯವನ್ನಾಡಿದ್ದರು. ಫಿಟ್ನೆಸ್ ಕಾರಣದಿಂದಾಗಿ ಭುವವೇಶ್ವರ್ ಕುಮಾರ್, ಟೆಸ್ಟ್ ಪಂದ್ಯದಿಂದ ದೂರವೇ ಉಳಿದಿದ್ದರು. 31 ವರ್ಷದ ಭುವನೇಶ್ವರ್ ಕುಮಾರ್, ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಡಿಸೆಂಬರ್ 26ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇದಾದ ಬಳಿಕ ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
