Ashes 2021: ಕೊನೆಯ ಮೂರು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ..!
ಅಡಿಲೇಡ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಎರಡನೇ ಟೆಸ್ಟ್ ಪಂದ್ಯ ಒಂದು ಕಡೆ ಸಾಗುತ್ತಿದ್ದು, ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯವು ಕೂಡಾ ಆಸ್ಟ್ರೇಲಿಯಾದ ಪಾಲಾಗುವ ಸಾಧ್ಯತೆಯಿದೆ. ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯ ಸೇರಿದಂತೆ ಇನ್ನುಳಿದ ಮೂರು ಪಂದ್ಯಗಳಿಗೆ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡ (Australia Cricket Team) ಪ್ರಕಟಗೊಂಡಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.

ಆ್ಯಷಸ್ ಟೆಸ್ಟ್ ಸರಣಿ 2021-22 ಭರ್ಜರಿಯಾಗಿ ಆರಂಭವಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯ ಕೂಡಾ ಆಸ್ಟ್ರೇಲಿಯಾ ಪಾಲಾಗುವ ಸಾಧ್ಯತೆಯಿದೆ.
ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ವೇಗಿಗಳಾದ ಜೋಶ್ ಹೇಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಬಾಕ್ಸಿಂಗ್ ಡೇ ಪಂದ್ಯಕ್ಕೆ ಆಸೀಸ್ ಆಯ್ಕೆಗೆ ಲಭ್ಯವಾಗಿದ್ದಾರೆ.
australia team
ವೇಗಿ ಜೋಶ್ ಹೇಜಲ್‌ವುಡ್ ಗಾಬಾ ಟೆಸ್ಟ್ ಪಂದ್ಯದಲ್ಲಿ ಸೊಂಟ ನೋವಿಗೆ ಒಳಗಾಗಿದ್ದರು. ಹೀಗಾಗಿ ಅಡಿಲೇಡ್ ಟೆಸ್ಟ್ ಪಂದ್ಯದಿಂದ ಹೇಜಲ್‌ವುಡ್ ಹೊರಗುಳಿದಿದ್ದರು. ಅವರ ಬದಲಿಗೆ ಜೇ ರಿಚರ್ಡ್‌ಸನ್ ತಂಡ ಕೂಡಿಕೊಂಡಿದ್ದರು. ಇನ್ನು ಪ್ಯಾಟ್ ಕಮಿನ್ಸ್ ಬದಲಿಗೆ ಮಿಚೆಲ್ ನೀಸರ್ ಕೂಡಾ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಅಚ್ಚರಿ ಎನ್ನುವಂತೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಮಾರ್ಕಸ್ ಹ್ಯಾರಿಸ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ)ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಹ್ಯಾರಿಸ್ ಬದಲಿಗೆ ಉಸ್ಮಾನ್ ಖವಾಜಾ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇನ್ನು ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಬೆನ್ನು ನೋವಿನ ಗಾಯಕ್ಕೆ ಒಳಗಾಗಿದ್ದು, ಆಸ್ಟ್ರೇಲಿಯಾ ಮ್ಯಾನೇಜ್‌ಮೆಂಟ್ ಸ್ಟಾರ್ಕ್‌ಗೆ ಅವಕಾಶ ನೀಡುತ್ತಾ ಅಥವಾ ರಿಚರ್ಡ್‌ಸನ್& ನೀಸರ್ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ: ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ನೀಶರ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ವೆಪ್ಸನ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್.