ಕೊರೋನಾದಿಂದಾಗಿ ಗಟ್ಟಿಗೊಂಡ ರೋಹಿತ್-ವಿರಾಟ್ ಫ್ರೆಂಡ್‌ಶಿಪ್..!
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಮನಸ್ತಾಪವಿದೆ ಎನ್ನುವ ಗಾಳಿಸುದ್ದಿ ಮರೆತು ಹೋಗುವಂತೆ ಈಗ ಕಾಲ ಬದಲಾಗಿದೆ. ಇದಕ್ಕೆ ಕೊರೋನಾ ಹಾಗೂ ರವಿಶಾಸ್ತ್ರಿ ಕೂಡಾ ಕಾರಣ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.01): ಕ್ವಾರಂಟೈನ್, ಬಯೋ ಬಬಲ್ ಬಹುತೇಕ ಎಲ್ಲಾ ಕ್ರಿಕೆಟಿಗರನ್ನು ಹೈರಾಣಾಗಿಸಿದೆ. ಈ ಬಗ್ಗೆ ಚಕಾರ ಎತ್ತಿದರೂ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾಗೆ ಒಂದು ರೀತಿಯಲ್ಲಿ ಲಾಭವೇ ಆಗಿದೆ. ಅದೇನೆಂದರೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರಿಬ್ಬರ ಸ್ನೇಹ ಕ್ವಾರಂಟೈನ್‌ನಲ್ಲಿ ಗಟ್ಟಿಯಾಗಿದೆ. ಇಬ್ಬರ ನಡುವಿನ ಮನಸ್ತಾಪಕ್ಕೆ ತೆರೆ ಬಿದ್ದಿದ್ದು, ಇದರ ಫಲವಾಗಿಯೇ ಇಂಗ್ಲೆಂಡ್ ವಿರುದ್ಧ ಮೂರೂ ಮಾದರಿಯ ಸರಣಿಗಳಲ್ಲಿ ಭಾರತ ಜಯಭೇರಿ ಬಾರಿಸಿತು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಗಳಲ್ಲಿ ಒಟ್ಟಿಗೆ ಆಡಿದ್ದ ರೋಹಿತ್ ಹಾಗೂ ಕೊಹ್ಲಿ, 3 ತಿಂಗಳ ಕಾಲ ಬಯೋ ಬಬಲ್‌ನಲ್ಲಿದ್ದರು. ಬಯೋ ಬಬಲ್‌ನೊಳಗೆ ಹೊರಗಿನವರಿಗೆ ಪ್ರವೇಶವಿಲ್ಲದ ಕಾರಣ, ಆಟಗಾರರಿಗೆ ಆಟಗಾರರೇ ಜೊತೆಗಾರರು. ಕುಟುಂಬ ಸದಸ್ಯರೂ ಪೂರ್ಣಾವಧಿಗೆ ಆಟಗಾರರೊಂದಿಗೆ ಇರಲಿಲ್ಲ. ಹೀಗಾಗಿ, ಈ ಸಂದರ್ಭದಲ್ಲಿ ಕೊಹ್ಲಿ ಹಾಗೂ ರೋಹಿತ್ ಕೂತು, ಮಾತುಕತೆ ಮೂಲಕ ತಮ್ಮ ನಡುವೆ ಇದ್ದ ಗೊಂದಲ, ಮನಸ್ತಾಪಗಳನ್ನು ಬಗೆಹರಿಸಿಕೊಂಡರು ಎನ್ನಲಾಗಿದೆ.
ಕೋಚ್ ಶಾಸ್ತ್ರಿ ಕಾರಣ: ಕೊಹ್ಲಿ ಹಾಗೂ ರೋಹಿತ್ ಒಟ್ಟಿಗೆ ಕೂತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪ್ರೇರೇಪಿಸಿದ್ದು ಭಾರತ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿಯಂತೆ. ಇಬ್ಬರು ಒಟ್ಟಿಗಿದ್ದರೆ ತಂಡಕ್ಕೆ, ಭಾರತೀಯ ಕ್ರಿಕೆಟ್‌ಗೆ ಆಗುವ ಲಾಭದ ಬಗ್ಗೆ ಶಾಸ್ತ್ರಿ ವಿವರಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 6 ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ!
‘ಇಬ್ಬರ ನಡುವಿನ ಮನಸ್ತಾಪದ ಬಗ್ಗೆ ಹೊರಗಿದ್ದ ಗುಸು ಗುಸು ಡ್ರೆಸ್ಸಿಂಗ್ ರೂಮ್‌ನಲ್ಲಿ ಬಹಳ ಗೊಂದಲ ಸೃಷ್ಟಿಸಿತ್ತು. ಆಟಗಾರರ ನಡುವೆ ವೈರತ್ವವಿದೆ ಎಂದು ಅಪಪ್ರಚಾರ ಮಾಡುವುದು ಭಾರತೀಯ ಕ್ರಿಕೆಟ್‌ನಲ್ಲಿ ಮೊದಲಿನಿಂದಲೂ ಇದೆ. ವೃತ್ತಿಪರ ಕ್ರಿಕೆಟಿಗರಾಗಿ ಕೊಹ್ಲಿ ಹಾಗೂ ರೋಹಿತ್ ನಡುವೆಯೂ ಕೆಲ ಭಿನ್ನಾಭಿಪ್ರಾಯಗಳು ಇದ್ದಿರಬಹುದು. ಸಮಯ ಕಳೆದಂತೆ ಅದು ಹೆಚ್ಚಾಗಿರಲೂಬಹುದು. ಆದರೆ ಇತ್ತೀಚಿನವರೆಗೂ ಇಬ್ಬರೂ ಒಟ್ಟಿಗೆ ಕೂತು ಆ ಬಗ್ಗೆ ಚರ್ಚಿಸಿರಲಿಲ್ಲ. ಈಗ ಇಬ್ಬರೂ ಗೊಂದಲ ಬಗೆಹರಿಸಿಕೊಂಡಿದ್ದು, ಅದರ ಫಲಿತಾಂಶ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಲ್ಲಿದೆ.
ಒಗ್ಗಟ್ಟಿನ ಮಂತ್ರ!: ರೋಹಿತ್ ಹಾಗೂ ಕೊಹ್ಲಿ ಇಬ್ಬರೂ ಒಮ್ಮತದಿಂದ ತಮ್ಮಿಬ್ಬರ ನಡುವೆ ವೈರತ್ವವಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಸುಳ್ಳು ಸುದ್ದಿಗಳಿಗೆ ತಡೆಯೊಡ್ಡಲು ನಿರ್ಧರಿಸಿ, ಈ ಸಂಬಂಧ ಸತತ ಪ್ರಯತ್ನ ನಡೆಸಿದರು ಎನ್ನಲಾಗಿದೆ. ಕ್ಯಾಮೆರಾ ಕಣ್ಣಿಗೆ ಕಾಣಿಸುವಂತೆ ಮೈದಾನದಲ್ಲಿ, ಹಲವು ಸನ್ನಿವೇಶಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡರು. ಪಂದ್ಯದ ವೇಳೆ ಒಟ್ಟಿಗೆ ರಣತಂತ್ರ ಹೂಡುವುದು, ಬ್ಯಾಟಿಂಗ್, ಫೀಲ್ಡಿಂಗ್ ವೇಳೆ ಒಟ್ಟಿಗೆ ಸಂಭ್ರಮಿಸುವುದು ಕಂಡುಬಂತು. ಪಂದ್ಯಗಳು ಮುಕ್ತಾಯಗೊಂಡ ಪ್ರಶಸ್ತಿ ವಿತರಣೆ ವೇಳೆ ಕೊಹ್ಲಿ, ರೋಹಿತ್‌ರ ಕೊಡುಗೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ರೋಹಿತ್, ಕೊಹ್ಲಿ ನಾಯಕತ್ವದ ಬಗ್ಗೆಯೂ ಹೊಗಳಿದ್ದರು. ಹಲವು ಪಂದ್ಯಗಳ ನಿರ್ಣಾಯಕ ಹಂತಗಳಲ್ಲಿ ಕೊಹ್ಲಿ ಮೈದಾನದಿಂದ ಹೊರಗುಳಿದು ರೋಹಿತ್ ತಂಡವನ್ನು ಮುನ್ನಡೆಸಿದ ಉದಾಹರಣೆಗಳೂ ಇವೆ.