ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 6 ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ!
ಪುಣೆ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲೂ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 6 ದಾಖಲೆಗಳನ್ನು ಬರೆದರು. ಆ ದಾಖಲೆಗಳ ವಿವರ ಇಲ್ಲಿದೆ.
1. ಟಿ20ಯಲ್ಲಿ ನಾಯಕನಾಗಿ ಅತಿಹೆಚ್ಚು ಫಿಫ್ಟಿ
ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕ ಕೊಹ್ಲಿ 12 ಅರ್ಧಶತಕ ಬಾರಿಸಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ರ 11 ಅರ್ಧಶತಕಗಳ ದಾಖಲೆಯನ್ನು ಮುರಿದರು.
2. ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತಿಹೆಚ್ಚು ರನ್
ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಕೊಹ್ಲಿ ಬರೆದರು. ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ವಿರಾಟ್ 231 ರನ್ ಕಲೆಹಾಕಿ, 2020ರಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 224 ರನ್ ಬಾರಿಸಿ ಕೆ.ಎಲ್.ರಾಹುಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
3. ಅಂತಾರಾಷ್ಟ್ರೀಯ ಟಿ20ಯಲ್ಲಿ 3000 ರನ್
ಅಂತಾರಾಷ್ಟ್ರೀಯ ಟಿ20ಯಲ್ಲಿ 3000 ರನ್ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಕೊಹ್ಲಿ ಬರೆದರು. 90 ಪಂದ್ಯಗಳಲ್ಲಿ ಅವರು 3159 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 2874 ರನ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
4. ಟಿ20ಯಲ್ಲಿ ನಾಯಕನಾಗಿ ಅತಿಹೆಚ್ಚು ರನ್
ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕನಾಗಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಬರೆದರು. 45 ಪಂದ್ಯಗಳಲ್ಲಿ ಕೊಹ್ಲಿ 1502 ರನ್ ಗಳಿಸಿದ್ದಾರೆ. ಆಸ್ಪ್ರೇಲಿಯಾದ ಆ್ಯರೋನ್ ಫಿಂಚ್ (1462 ರನ್)ರನ್ನು ಕೊಹ್ಲಿ ಹಿಂದಿಕ್ಕಿದರು.
5. ಏಕದಿನದಲ್ಲಿ 3ನೇ ಕ್ರಮಾಂಕದಲ್ಲಿ 10,000 ರನ್
ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 3ನೇ ಕ್ರಮಾಂಕದಲ್ಲಿ 10000 ರನ್ ಪೂರೈಸಿದ 2ನೇ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯನ್ನು ಬರೆದರು. ಕೇವಲ 190 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್ 330 ಇನ್ನಿಂಗ್ಸ್‌ಗಳಲ್ಲಿ 12662 ರನ್ ಕಲೆಹಾಕಿದ್ದಾರೆ.
6. ತವರಿನಲ್ಲಿ ಅತಿವೇಗವಾಗಿ 10,000 ರನ್
ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಕೊಹ್ಲಿ, ತವರಿನಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿವೇಗವಾಗಿ 10000 ರನ್ ಗಳಿಸಿದ ಆಟಗಾರ ಎನ್ನುವ ದಾಖಲೆ ಬರೆದರು. ಕೇವಲ 195 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಕೊಹ್ಲಿ, ರಿಕಿ ಪಾಂಟಿಂಗ್ (219 ಇನ್ನಿಂಗ್ಸ್)ರ ದಾಖಲೆ ಮುರಿದರು. ತವರಲ್ಲಿ 10000 ರನ್ ಗಳಿಸಿದ ಭಾರತದ 2ನೇ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಮೊದಲು ಸಚಿನ್ ತೆಂಡುಲ್ಕರ್ ಈ ಸಾಧನೆ ಮಾಡಿದ್ದರು.