ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!
ಕೊರೋನಾ ವೈರಸ್‌ನಿಂದಾಗಿ ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿರುವಾಗಲೇ ಮತ್ತೊಂದು ಸಮಸ್ಯೆ ತಲೆ ಎತ್ತಿದೆ. ಏನದು ಸಮಸ್ಯೆ? ಕೊಹ್ಲಿ ನೀಡಿದ ಸಂದೇಶವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ನವದೆಹಲಿ(ಏ.21): ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ದೇಶಾದ್ಯಂತ ಎರಡನೇ ಹಂತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಲಾಕ್‌ಡೌನ್ ಬೆನ್ನಲ್ಲೇ ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ವರದಿಯಾಗಿತ್ತು. ಕೌಟುಂಬಿಕ ದೌರ್ಜನ್ಯದ ಬಗ್ಗೆ ದ್ವನಿಯೆತ್ತಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ, ಭಾರತ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ಮಿಥಾಲಿ ರಾಜ್ ಹಾಗೂ ಕೆಲ ಬಾಲಿವುಡ್ ಸೆಲಿಬ್ರಿಟಿಗಳು ಮಹತ್ವದ ಸಂದೇಶ ರವಾನಿಸಿದ್ದಾರೆ.
ನೀವು ಕೌಟುಂಬಿಕ ದೌರ್ಜನ್ಯದ ಸಂತ್ರಸ್ಥರಾಗಿದ್ದರೆ ದಯವಿಟ್ಟು ದೂರು ನೀಡಿ ಎಂಬ ಅಡಿಬರಹದೊಂದಿಗೆ ಮಹತ್ತರವಾದ ಸಂದೇಶ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಕೂಡಾ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬಾಲಿವುಡ್ ತಾರೆಯರಾದ ಫರ್ಹಾನ್ ಅಖ್ತರ್. ಕರಣ್ ಜೋಹರ್, ಮಾಧುರಿ ದೀಕ್ಷಿತ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡಿ, ಮಹಿಳೆಯರು ಮೌನ ಮುರಿದು ದೂರು ನೀಡಿ. ಅಂತಿಮವಾಗಿ ಕೌಟುಂಬಿಕ ದೌರ್ಜನ್ಯವನ್ನು ಲಾಕ್‌ಡೌನ್ ಮಾಡಿ ಎನ್ನುವ ಸಂದೇಶ ಈ ವಿಡಿಯೋದಲ್ಲಿದೆ.
ಲಾಕ್‌ಡೌನ್ ಜಾರಿ ಬಳಿಕ ಕೌಟುಂಬಿಕ ದೌರ್ಜನ್ಯ ಕೇಸ್ ಹೆಚ್ಚಳ
ಮೊದಲ ಹಂತದ ಲಾಕ್‌ಡೌನ್ ವೇಳೆಯಲ್ಲಿ ಮಾರ್ಚ್ 24ರಿಂದ ಏಪ್ರಿಲ್ 01ರವರೆಗೆ ಮಹಿಳಾ ಆಯೋಗಕ್ಕೆ 257 ದೂರುಗಳು ಬಂದಿದ್ದವು. ಇದರಲ್ಲಿ 69 ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದವಾಗಿದ್ದವು. ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿ ದೂರು ಸ್ವೀಕರಿಸಲು ದೇಶದ ನಾನಾ ಭಾಗಗಳಲ್ಲಿ 52 ಸಹಾಯವಾಣಿಗಳನ್ನು ತೆರೆದಿದೆ.