ಸಿಡ್ನಿ(ಡಿ.09): ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಮುಕ್ತಾಯವಾಗಿದ್ದು, ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಗೆದ್ದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಮೊದಲೆರಡು ಟಿ20 ಪಂದ್ಯಗಳನ್ನು ಭರ್ಜರಿಯಾಗಿ ಜಯಿಸಿದ್ದ ಟೀಂ ಇಂಡಿಯಾ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 12 ರನ್‌ಗಳಿಂದ ಶರಣಾಗಿದೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಸರಣಿಯಲ್ಲಿ ತಂಡಕ್ಕೆ ಸಿಕ್ಕ ಹಲವು ಸಕಾರಾತ್ಮಕ ಅಂಶಗಳನ್ನು ಮೆಲುಕು ಹಾಕಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದ ಟೀಂ ಇಂಡಿಯಾ ಬಳಿಕ ಕಮ್‌ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ತಮಿಳುನಾಡು ಮೂಲದ ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಬಗ್ಗೆ ನಾಯಕ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ವೇಳೆಗೆ ಟಿ. ನಟರಾಜನ್ ತಂಡದ ಅತ್ಯುತ್ತಮ ಅಸ್ತ್ರವಾಗುವ ವಿಶ್ವಾಸವನ್ನು ನಾಯಕ ಕೊಹ್ಲಿ ವ್ಯಕ್ತಪಡಿಸಿದ್ದಾರೆ. 

ಸರಣಿ ಶ್ರೇಷ್ಠ ಟ್ರೋಫಿಯನ್ನು ನಟರಾಜನ್‌ಗೆ ಕೊಟ್ಟ ಹಾರ್ದಿಕ್ ಪಾಂಡ್ಯ..!
 
ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟಿ ನಟರಾಜನ್ ಒತ್ತಡದ ಸಂದರ್ಭದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟರಾಜನ್ ಆಡಿದ ಮೊದಲ ಕೆಲವು ಪಂದ್ಯಗಳಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಎಡಗೈ ವೇಗಿಗಳು ಯಾವುದೇ ತಂಡದ ಪಾಲಿಗೆ ಮಹತ್ವದ ಪಾತ್ರ ನಿಭಾಯಿಸುತ್ತಾರೆ. ನಟರಾಜನ್ ಇದೇ ರೀತಿಯ ಪ್ರದರ್ಶನ ತೋರಿದರೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯಲ್ಲಿ ಟಿ ನಟರಾಜನ್ 6 ವಿಕೆಟ್‌ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ಗೌರವಕ್ಕೆ ಭಾಜನರಾಗಿದ್ದರು.