ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಮೊಣಕಾಲಿಗೆ ಗಾಯವಾಗಿದೆ. ಅಭ್ಯಾಸದ ವೇಳೆ ಗಾಯಗೊಂಡಿದ್ದು, ಐಸ್‌ಪ್ಯಾಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಪಾಕ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಆಡುವುದು ಅನುಮಾನವಾಗಿದೆ.
ದುಬೈ (ಫೆ.22): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಘಾತ ಎದುರಿಸಿದೆ. ಭಾರತದ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಶನಿವಾರ ಪಂದ್ಯಕ್ಕೂ ಮುನ್ನ ತಂಡದ ಅಂತಿಮ ಅಭ್ಯಾಸ ಅವಧಿಯ ವೇಳೆ ಕೊಹ್ಲಿಯ ಮೊಣಕಾಲಿಗೆ ಗಾಯವಾಗಿದ್ದು, ಅಭ್ಯಾಸ ಅವಧಿಯಲ್ಲಿ ಬಹುಕಾಲ ಅವರು ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಇರಿಸಿಕೊಂಡೇ ಕಾಣಿಸಿಕೊಂಡಿದ್ದರು.
ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಕಟ್ಟಿಕೊಂಡು ಡಗ್‌ಔಟ್‌ನಲ್ಲಿ ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವ ಸಾಕಷ್ಟು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕೊಹ್ಲಿ ಫಿಟ್‌ನೆಸ್ ಬಗ್ಗೆ ಟೀಮ್ ಇಂಡಿಯಾದಲ್ಲೂ ಆತಂಕ ಶುರುವಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಆಡುತ್ತಾರೆ. ಅದೇ ಕಾರಣಕ್ಕಾಗಿ ಕೊಹ್ಲಿ ಫಿಟ್‌ನೆಸ್ ಈ ಪಂದ್ಯಕ್ಕೆ ಪ್ರಮುಖವಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಲ್ಲದೆ ಕಣಕ್ಕಿಳಿಯುವುದನ್ನು ಟೀಮ್ ಇಂಡಿಯಾ ಕೂಡ ಇಷ್ಟಪಡುತ್ತಿಲ್ಲ.
ಚಾಂಪಿಯನ್ಸ್ ಟ್ರೋಫಿ ವರದಿ ಮಾಡಲು ತೆರಳಿರುವ ಹಲವು ಪತ್ರಕರ್ತರು ಕೊಹ್ಲಿಗೆ ಗಾಯವಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೂ ಬಿಸಿಸಿಐ ಮಾತ್ರ ಐಸ್‌ಪ್ಯಾಕ್ ಇರಿಸಿಕೊಂಡ ಕೊಹ್ಲಿಯ ವೈರಲ್ ಚಿತ್ರಗಳ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಅಭ್ಯಾಸ ವೇಳೆ ಚೆಂಡು ಬಡಿದು ಗಾಯಗೊಂಡಿದ್ದಾರೆಯೇ ಅಥವಾ ಮೊಣಕಾಲಿನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡ ಕಾರಣಕ್ಕೆ ಐಸ್‌ಪ್ಯಾಕ್ ಇರಿಸಿಕೊಂಡಿದ್ದಾರೆಯೇ ಅನ್ನೋದು ಗೊತ್ತಾಗಿಲ್ಲ. ಆದರೆ, ಈ ಚಿತ್ರ ಮಾತ್ರ ಅಭಿಮಾನಿಗಳಲ್ಲಿ ತಳಮಳ ಮೂಡಿಸಿದೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಲಭ್ಯರಾಗೋದು ಅನುಮಾನ ಎನ್ನುವ ಸೂಚನೆ ಇದರಿಂದ ಸಿಕ್ಕಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್-ಆಸೀಸ್ ಪಂದ್ಯದ ವೇಳೆ ಎಡವಟ್ಟು; ಪಾಕ್ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ! ವಿಡಿಯೋ ವೈರಲ್
ಪಾಕಿಸ್ತಾನ ತಂಡದ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ಸಲುವಾಗಿ ಇಂದು ನಿಗದಿಯಾಗಿದ್ದ ಅಭ್ಯಾಸ ಅವಧಿಗೆ ಮೂರು ಗಂಟೆ ಮುಂಚಿತವಾಗಿಯೇ ಬಂದಿದ್ದರು. ಅವರೊಂದಿಗೆ 10-12 ನೆಟ್ ಬೌಲರ್‌ಗಳು ಕೂಡ ಆಗಮಿಸಿದ್ದರು.
'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎದುರು ಪಾಕ್ ಗೆಲ್ಲಲಿ': ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು!
ಕೊಹ್ಲಿ ಫಾರ್ಮ್ ಕೂಡ ಕಳವಳಕಾರಿಯಾಗಿದ್ದು, ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ರನ್‌ಗಳಿಸಲು ಪರದಾಟ ನಡೆಸಿದ್ದರು. ಈಗಾಗಲೇ ಗಾಯದ ಕಾರಣಕ್ಕೆ ಜಸ್‌ಪ್ರೀತ್ ಬುಮ್ರಾರನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿಯ ಅಲಭ್ಯತೆ ಇನ್ನಷ್ಟು ಬಲ ಕುಗ್ಗಿಸಲಿದೆ.
