ಪುಣೆ(ಮಾ.23): ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್‌ ಧವನ್ ಕೇವಲ 2 ರನ್‌ ಅಂತರದಲ್ಲಿ ವೃತ್ತಿಜೀವನದ 18ನೇ ಏಕದಿನ ಶತಕ ಬಾರಿಸುವ ಅವಕಾಶ ಕೈಚೆಲ್ಲಿದ್ದಾರೆ.  ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ನಾಯಕ ಇಯಾನ್‌ ಮಾರ್ಗನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.

ಹೌದು, ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಸಮಯೋಚಿತ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಒಟ್ಟು 106 ಎಸೆತಗಳನ್ನು ಎದುರಿಸಿದ ಧವನ್‌ 11 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 98 ರನ್‌ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ರೋಹಿತ್‌ ಜತೆ ಮೊದಲ ವಿಕೆಟ್‌ಗೆ 64 ರನ್‌ಗಳ ಜತೆಯಾಟ ನಿಭಾಯಿಸಿದ ಧವನ್‌, ಅದಾದ ಬಳಿಕ ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಜತೆ ಶತಕದ ಜತೆಯಾಟ ನಿಭಾಯಿಸಿದರು.

ಆರಂಭದಲ್ಲಿ ಸಾಕಷ್ಟು ಎಚ್ಚರಿಕೆಯ ಆಟವಾಡಿದ ಧವನ್‌, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಅನಾಯಾಸವಾಗಿ ರನ್‌ಗಳಿಸಲಾರಂಭಿಸಿದರು. ಮಾರ್ಕ್‌ವುಡ್‌, ಆದಿಲ್ ರಶೀದ್‌ ಹಾಗೂ ಮೋಯಿನ್‌ ಅಲಿ ಎದುರು ಆಕರ್ಷಕ ಬೌಂಡರಿ ಚಚ್ಚುವ ಮೂಲಕ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿದರು. 

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಪ್ರಸಿದ್ಧ್ ಕೃಷ್ಣ, ಕೃನಾಲ್‌ ಪಾಂಡ್ಯ ಡೆಬ್ಯೂ

ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಿ ಆ ಬಳಿಕ ಬೆಂಚ್‌ ಕಾಯಿಸಿದ್ದ ಧವನ್‌, ಇದೀಗ ಏಕದಿನ ಸರಣಿಯಲ್ಲಿ 98 ರನ್ ದಾಖಲಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ.