ಲಂಕಾ ಎದುರು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಆಫ್ಘಾನಿಸ್ತಾನಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ ವನಿಂದು ಹಸರಂಗಶ್ರೀಲಂಕಾಗೆ ಗೆಲ್ಲಲು 145 ರನ್ ಗುರಿ ನೀಡಿದ ಆಫ್ಘಾನಿಸ್ತಾನ
ಬ್ರಿಸ್ಬೇನ್(ನ.01): ಆಫ್ಘಾನಿಸ್ತಾನದ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ, ಲಂಕಾ ಸ್ಪಿನ್ನರ್ ವನಿಂದು ಹಸರಂಗ ಶಿಸ್ತುಬದ್ದ ದಾಳಿಯ ನೆರವಿನಿಂದ ಆಫ್ಘಾನ್ ತಂಡವನ್ನು 144 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ನಿಗದಿತ 20 ಓವರ್‌ಗಳಲ್ಲಿ ಆಫ್ಘಾನಿಸ್ತಾನ ತಂಡವು 8 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ.
ಇಲ್ಲಿನ ಗಾಬಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ರೆಹಮನುಲ್ಲಾ ಗುರ್ಬಾಜ್ ಹಾಗೂ ಉಸ್ಮಾನ್ ಘನಿ 42 ಓವರ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ವಿಕೆಟ್ ಕೀಪರ್ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ 28 ರನ್ ಬಾರಿಸುವ ಮೂಲಕ ಆಫ್ಘಾನ್ ಪರ ಗರಿಷ್ಠ ಸ್ಕೋರ್ ಬಾರಿಸಿದ ಬ್ಯಾಟರ್ ಎನಿಸಿದರು.
ಇನ್ನುಳಿದಂತೆ ಉಸ್ಮಾನ್ ಘನಿ(27), ಇಬ್ರಾಹಿಂ ಜದ್ರಾನ್(18), ಗುಲ್ಬದ್ದೀನ್ ನೈಬ್(12) ಹಾಗೂ ಮೊಹಮ್ಮದ್ ನಬಿ(13) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಹಸರಂಗ ಶೈನಿಂಗ್: ಆಸ್ಟ್ರೇಲಿಯಾ ಎದುರು ಸಾಕಷ್ಟು ದುಬಾರಿಯಾಗಿದ್ದ ಲಂಕಾದ ತಾರಾ ಸ್ಪಿನ್ನರ್ ವನಿಂದು ಹಸರಂಗ, ಆಫ್ಘಾನ್ ಎದುರು ಅತ್ಯಂತ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆದರು. ವನಿಂದು ಹಸರಂಗ 4 ಓವರ್ ಬೌಲಿಂಗ್ ಮಾಡಿ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ 20ನೇ ಓವರ್ ಬೌಲಿಂಗ್ ಮಾಡಿ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಆಫ್ಘಾನ್ ತಂಡವು 150ರ ಗಡಿ ದಾಟದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
T20 World Cup ಇಂದು ಆಫ್ಘನ್-ಲಂಕಾ ಕ್ವಾರ್ಟರ್ ಫೈನಲ್!
ಇನ್ನು ವನಿಂದು ಹಸರಂಗಗೆ ಉತ್ತಮ ಸಾಥ್ ನೀಡಿದ ಲಹಿರು ಕುಮಾರ 2 ವಿಕೆಟ್ ಪಡೆದರೆ, ಕುಸಾಲ್ ರಜಿತ ಹಾಗೂ ಧನಂಜಯ ಡಿ ಸಿಲ್ವಾ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಸಂಕ್ಷಿಪ್ತ ಸ್ಕೋರ್
ಆಫ್ಘಾನಿಸ್ತಾನ: 144/8
ರೆಹಮನುಲ್ಲಾ ಗುರ್ಬಾಜ್: 28
ಉಸ್ಮಾನ್ ಘನಿ : 28
ವನಿಂದು ಹಸರಂಗ: 13/3
(* ಆಫ್ಘಾನಿಸ್ತಾನ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)
