T20 World Cup: ಭಾರತಕ್ಕಿಂದು ಆಸ್ಟ್ರೇಲಿಯಾ ವಿರುದ್ದ ಅಭ್ಯಾಸ ಪಂದ್ಯ

* ಪಾಕಿಸ್ತಾನ ವಿರುದ್ದದ ಪಂದ್ಯಕ್ಕಿಂದು ಟೀಂ ಇಂಡಿಯಾ ಬಲಿಷ್ಠ ಆಡುವ ಹನ್ನೊಂದರ ಬಳಗ ನಿರ್ಧಾರ

* ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ರೆಡಿಯಾದ ಟೀಂ ಇಂಡಿಯಾ

* ನಾಯಕ ವಿರಾಟ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ಹಾಗೂ ಮೆಂಟರ್‌ ಎಂ.ಎಸ್‌.ಧೋನಿ ಮುಂದೆ ಹಲವು ಆಯ್ಕೆ

T20 World Cup Team India Take on Australia in 2nd Warm up Match in Dubai kvn

ದುಬೈ(ಅ.20): ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಮಹಾಕದನಕ್ಕೆ ಬಲಿಷ್ಠ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಆಸ್ಪ್ರೇಲಿಯಾ ವಿರುದ್ಧ ಬುಧವಾರ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಪಾಕ್‌ ವಿರುದ್ಧದ ಪಂದ್ಯಕ್ಕೆ ಹನ್ನೊಂದರ ಬಳಗ ನಿರ್ಧಾರವಾಗುವ ಸಾಧ್ಯತೆ ಇದೆ.

ನಾಯಕ ವಿರಾಟ್‌ ಕೊಹ್ಲಿ (Virat Kohli), ಕೋಚ್‌ ರವಿಶಾಸ್ತ್ರಿ (Ravi Shastri) ಹಾಗೂ ಮೆಂಟರ್‌ ಎಂ.ಎಸ್‌.ಧೋನಿ (MS Dhoni) ಮುಂದೆ ಹಲವು ಆಯ್ಕೆಗಳಿದ್ದು, ಸೂಕ್ತವಾದದ್ದನ್ನು ಆಯ್ದುಕೊಳ್ಳಬೇಕಿದೆ. ಇಂಗ್ಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಇಶಾನ್‌ ಕಿಶನ್‌ ಮನಮೋಹಕ ಪ್ರದರ್ಶನ ನೀಡಿದ್ದರು. ಆದರೆ ಪಂದ್ಯಕ್ಕೂ ಮೊದಲೇ ಕೊಹ್ಲಿ, ‘ರೋಹಿತ್‌ ಶರ್ಮಾ (Rohit sharma) ಹಾಗೂ ಕೆ.ಎಲ್‌.ರಾಹುಲ್‌ (KL Rahul) ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಆಡಲಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಆಡುತ್ತೇನೆ’ ಎಂದಿದ್ದರು. ಉತ್ತಮ ಲಯದಲ್ಲಿರುವ ಕಿಶನ್‌ಗೆ ಸ್ಥಾನ ಸಿಗಲಿದೆಯೇ? ಸಿಕ್ಕರೆ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಇನ್ನು ಇಂಗ್ಲೆಂಡ್‌ ವಿರುದ್ಧ ಸೂರ್ಯಕುಮಾರ್‌ ಯಾದವ್‌ಗೂ ಮೊದಲೇ ರಿಷಭ್‌ ಪಂತ್‌ (Rishabh Pant) ಕ್ರೀಸ್‌ಗಿಳಿದಿದ್ದರು. ಟೂರ್ನಿಯುದ್ದಕ್ಕೂ ಪಂತ್‌ರನ್ನೇ 4ನೇ ಕ್ರಮಾಂಕದಲ್ಲೇ ಆಡಿಸಬೇಕಾ ಇಲ್ಲವೇ ಸೂರ್ಯ ಅಥವಾ ಕಿಶನ್‌ಗೆ ಆ ಸ್ಥಾನ ನೀಡಬೇಕಾ ಎನ್ನುವ ಪ್ರಶ್ನೆಗೂ ಕೊಹ್ಲಿ ಹಾಗೂ ಕೋಚಿಂಗ್‌ ಸಿಬ್ಬಂದಿ ಉತ್ತರ ಕಂಡುಕೊಳ್ಳಬೇಕಿದೆ. ರೋಹಿತ್‌ ಹೊರತುಪಡಿಸಿ ಟೀಂ ಇಂಡಿಯಾ (Team India) ಬ್ಯಾಟ್ಸ್‌ಮನ್‌ಗಳು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಆಡಬಲ್ಲರು. ಇದು ಭಾರತ ತಂಡಕ್ಕಿರುವ ಲಾಭ. ಆದರೂ ನಿರ್ದಿಷ್ಟ ಕ್ರಮಾಂಕಗಳನ್ನು ನಿಗದಿಪಡಿಸಲು ನಾಯಕ ಕೊಹ್ಲಿ ಉದ್ದೇಶಿಸಿದ್ದಾರೆ.

T20 World Cup 2021: ಅಭ್ಯಾಸ ಪಂದ್ಯದಲ್ಲಿ ಶುಭಾರಂಭ, ಇಂಗ್ಲೆಂಡ್ ಮಣಿಸಿದ ಭಾರತ!

ಭಾರತ ತಂಡ ಟಿ20 ಮಾದರಿಯಲ್ಲಿ ಉತ್ತಮ ಲಯದಲ್ಲಿದೆ. ತಂಡ 2019ರಿಂದ ಸತತ 8 ಸರಣಿಗಳನ್ನು ಗೆದ್ದಿದೆ. ಇನ್ನು 2016ರ ಟಿ20 ವಿಶ್ವಕಪ್‌ ಬಳಿಕ ಆಡಿರುವ 72 ಟಿ20 ಪಂದ್ಯಗಳಲ್ಲಿ 45ರಲ್ಲಿ ಗೆದ್ದಿದೆ.

ಹಾರ್ದಿಕ್‌ ಭವಿಷ್ಯ ನಿರ್ಧಾರ?: ಬ್ಯಾಟಿಂಗ್‌ ಕ್ರಮಾಂಕವನ್ನು ಸ್ಥಿರಗೊಳಿಸುವುದರ ಜೊತೆಗೆ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ತಜ್ಞ ಬ್ಯಾಟರ್‌ ಆಗಿ ಆಯ್ಕೆ ಮಾಡಿಕೊಳ್ಳಬೇಕಾ ಇಲ್ಲವೇ ಅವರನ್ನು ಹೊರಗಿಟ್ಟು ಶಾರ್ದೂಲ್‌ ಠಾಕೂರ್‌ಗೆ ಆಲ್ರೌಂಡರ್‌ ಸ್ಥಾನ ನೀಡಬೇಕಾ ಎನ್ನುವ ಗೊಂದಲಕ್ಕೂ ಪರಿಹಾರ ಸಿಗಬೇಕಿದೆ. ಹಾರ್ದಿಕ್‌ ಇಂಗ್ಲೆಂಡ್‌ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್‌ ಮಾಡುವಲ್ಲಿ ಯಶಸ್ಸು ಕಾಣಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಬೌಲ್‌ ಮಾಡಲಿಲ್ಲ. ಆಸೀಸ್‌ ವಿರುದ್ಧ ಬೌಲ್‌ ಮಾಡಿ ತಮ್ಮ ಫಿಟ್ನೆಸ್‌ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ.

T20 World Cup ಟೂರ್ನಿಗೆ ಟೀಂ ಇಂಡಿಯಾ ಆರಂಭಿಕರು ಯಾರು..?

ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ರೋಹಿತ್‌ ಶರ್ಮಾ, ವರುಣ್‌ ಚಕ್ರವರ್ತಿ, ಶಾರ್ದೂಲ್‌ ಠಾಕೂರ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಬಹುತೇಕ ಖಚಿತ. ರೋಹಿತ್‌ ತಂಡದ ಮೊದಲ ಆಯ್ಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವರುಣ್‌ ಹಾಗೂ ಶಾರ್ದೂಲ್‌ಗೆ ಪ್ರಬಲ ಪೈಪೋಟಿ ಇದೆ. ರಾಹುಲ್‌ ಚಹರ್‌ರನ್ನು ಹಿಂದಿಕ್ಕಿ ವರುಣ್‌ ಸ್ಥಾನ ಗಳಿಸಬೇಕಿದೆ. ಇನ್ನು ಶಾರ್ದೂಲ್‌, ಹಿರಿಯ ವೇಗಿ ಭುವನೇಶ್ವರ್‌ರನ್ನು ತಂಡ ಹೊರಗಿಡುವಂತೆ ಮಾಡಬೇಕಿದ್ದರೆ ಉತ್ತಮ ಪ್ರದರ್ಶನ ತೋರಲೇಬೇಕು.

ಮತ್ತೊಂದಡೆ ಆಸ್ಪ್ರೇಲಿಯಾ ಸಹ ಸೂಪರ್‌-12 ಹಂತ ಆರಂಭಗೊಳ್ಳುವ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ. ಪ್ರಮುಖವಾಗಿ ಡೇವಿಡ್‌ ವಾರ್ನರ್‌ ಲಯಕ್ಕೆ ಮರಳಲು ಹಾತೊರೆಯುತ್ತಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios