T20 World Cup: ಆಫ್ಘಾನ್ ಎದುರು ಜಯ ತಂದುಕೊಟ್ಟ ಧನಂಜಯ..! ಲಂಕಾ ಸೆಮೀಸ್ ಕನಸು ಜೀವಂತ
ಆಫ್ಘಾನಿಸ್ತಾನ ಎದುರು 6 ವಿಕೆಟ್ ಜಯ ಸಾಧಿಸಿದ ಶ್ರೀಲಂಕಾ
ಈ ಗೆಲುವಿನೊಂದಿಗೆ ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡ ಲಂಕಾ
ಈ ಸೋಲಿನೊಂದಿಗೆ ಆಫ್ಘಾನ್ ಸೆಮೀಸ್ ಕನಸು ಭಗ್ನ
ಬ್ರಿಸ್ಬೇನ್(ನ.01): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 32ನೇ ಪಂದ್ಯದಲ್ಲಿ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಧನಂಜಯ ಡಿ ಸಿಲ್ವಾ, ಲಂಕಾ ಗೆಲುವಿನ ರೂವಾರಿ ಎನಿಸಿಕೊಂಡರು. ಇನ್ನು ಈ ಸೋಲಿನೊಂದಿಗೆ ಆಫ್ಘಾನಿಸ್ತಾನ ತಂಡದ ಸೆಮೀಸ್ ಕನಸು ಭಗ್ನವಾಗಿದ್ದು, ಆಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಇಲ್ಲಿನ ದ ಗಾಬಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘಾನ್ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಪಥುಮ್ ನಿಸ್ಸಾಂಕ ವಿಕೆಟ್ ಕಳೆದುಕೊಂಡು ಆಘಾತಕಕ್ಕೊಳಗಾಯಿತು. ನಿಸ್ಸಾಂಕ 10 ರನ್ ಬಾರಿಸಿ ಮುಜೀಬ್ ಉರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಹಾಗೂ ಧನಂಜಯ ಡಿ ಸಿಲ್ವಾ ಜೋಡಿ 34 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಕುಸಾಲ್ ಮೆಂಡಿಸ್ 25 ರನ್ ಬಾರಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಲಂಕಾಗೆ ಗೆಲುವಿನ ಸಿಂಚನ ನೀಡಿದ ಧನಂಜಯ: ಕುಸಾಲ್ ಮೆಂಡಿಸ್ ವಿಕೆಟ್ ಪತನದ ಬಳಿಕ ಚುರುಕಿನ ಬ್ಯಾಟಿಂಗ್ ನಡೆಸುವತ್ತ ಗಮನ ಹರಿಸಿದ ಧನಂಜಯ ಡಿ ಸಿಲ್ವಾ ಮೂರನೇ ವಿಕೆಟ್‌ಗೆ ಚರಿತ್ ಅಸಲಂಕಾ ಜತೆಗೂಡಿ 54 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ತಲುಪಿಸಿದರು. ಅಸಲಂಕಾ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಧನಂಜಯ ಡಿ ಸಿಲ್ವಾ ಕೇವಲ 42 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 66 ರನ್ ಬಾರಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಕೊನೆಯಲ್ಲಿ ಭನುಕಾ ರಾಜಪಕ್ಸಾ 18 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ರೆಹಮನುಲ್ಲಾ ಗುರ್ಬಾಜ್ ಹಾಗೂ ಉಸ್ಮಾನ್ ಘನಿ 42 ಓವರ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ವಿಕೆಟ್ ಕೀಪರ್ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ 28 ರನ್ ಬಾರಿಸುವ ಮೂಲಕ ಆಫ್ಘಾನ್ ಪರ ಗರಿಷ್ಠ ಸ್ಕೋರ್ ಬಾರಿಸಿದ ಬ್ಯಾಟರ್ ಎನಿಸಿದರು. ಇನ್ನುಳಿದಂತೆ ಉಸ್ಮಾನ್ ಘನಿ(27), ಇಬ್ರಾಹಿಂ ಜದ್ರಾನ್(18), ಗುಲ್ಬದ್ದೀನ್ ನೈಬ್(12) ಹಾಗೂ ಮೊಹಮ್ಮದ್ ನಬಿ(13) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಶ್ರೀಲಂಕಾ ಪರ ಶಿಸ್ತಿನ ದಾಳಿ ನಡೆಸಿದ ವನಿಂದು ಹಸರಂಗ 4 ಓವರ್ ಬೌಲಿಂಗ್ ಮಾಡಿ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ವನಿಂದು ಹಸರಂಗಗೆ ಉತ್ತಮ ಸಾಥ್ ನೀಡಿದ ಲಹಿರು ಕುಮಾರ 2 ವಿಕೆಟ್ ಪಡೆದರೆ, ಕುಸಾಲ್ ರಜಿತ ಹಾಗೂ ಧನಂಜಯ ಡಿ ಸಿಲ್ವಾ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾದರು.