T20 World Cup: ರೂಸೌ ಸಿಡಿಲಬ್ಬರದ ಶತಕ, ಬಾಂಗ್ಲಾಗೆ ಕಠಿಣ ಗುರಿ ನೀಡಿದ ದಕ್ಷಿಣ ಆಫ್ರಿಕಾ
ಬಾಂಗ್ಲಾದೇಶ ಎದುರು ಬೃಹತ್ ಮೊತ್ತ ಕಲೆಹಾಕಿದ ದಕ್ಷಿಣ ಆಫ್ರಿಕಾ
ಟಿ20 ಕ್ರಿಕೆಟ್‌ನಲ್ಲಿ ಸತತ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದ ರಿಲೇ ರೂಸೌ
ಮೊದಲು ಬ್ಯಾಟ್ ಮಾಡಿ 205 ರನ್ ಕಲೆಹಾಕಿದ ಹರಿಣಗಳ ಪಡೆ
ಸಿಡ್ನಿ(ಅ.27): ರೀಲೆ ರೂಸೌ(109) ಸ್ಪೋಟಕ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿದ್ದು, ಬಾಂಗ್ಲಾದೇಶ ತಂಡಕ್ಕೆ ಕಠಿಣ ಗುರಿ ನೀಡಿದೆ. ಮಳೆಯ ಅಡಚಣೆಯ ಹೊರತಾಗಿಯೂ ಹರಿಣಗಳ ಪಡೆ ರನ್ ಮಳೆ ಹರಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ತೆಂಬಾ ಬವುಮಾ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ವೇಗಿ ಟಸ್ಕಿನ್ ಅಹಮದ್ ಬೌಲಿಂಗ್‌ನಲ್ಲಿ ಬವುಮಾ ನೂರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಡಿ ಕಾಕ್-ರೂಸೌ ಬ್ಯಾಟಿಂಗ್ ಜುಗಲ್ಬಂದಿ: ದಕ್ಷಿಣ ಆಫ್ರಿಕಾ ನಾಯಕ ಬವುಮಾ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಕ್ವಿಂಟನ್ ಡಿ ಕಾಕ್ ಹಾಗೂ ರಿಲೇ ರೂಸೌ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಯಸಸ್ವಿಯಾದರು. ಅದರಲ್ಲೂ ರೂಸೌ, ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್‌ಗೆ ರಿಲೇ ರೂಸೌ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 168 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಮೊತ್ತವನ್ನು 170ರ ಗಡಿ ತಲುಪಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಭಾರತ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಶತಕ ಚಚ್ಚಿದ್ದ ರೂಸೌ, ಇದೀಗ ತಾವಾಡಿದ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಂದು ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ರೂಸೌ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
T20 World Cup ಬಾಂಗ್ಲಾದೇಶ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ
ದಿಢೀರ್ ಕುಸಿದ ಹರಿಣಗಳು: ದಕ್ಷಿಣ ಆಫ್ರಿಕಾ ತಂಡವು ಒಂದು ಹಂತದಲ್ಲಿ ಕ್ವಿಂಟನ್ ಡಿ ಕಾಕ್ ವಿಕೆಟ್ ಪತನಕ್ಕೂ ಮುನ್ನ 14.3 ಓವರ್‌ಗಳಲ್ಲಿ 170 ರನ್ ಬಾರಿಸಿತ್ತು. ಆದರೆ ಡಿ ಕಾಕ್ ವಿಕೆಟ್ ಪತನದ ಬಳಿಕ ಹರಿಣಗಳ ಬ್ಯಾಟಿಂಗ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಬಾಂಗ್ಲಾದೇಶ ಬೌಲರ್‌ಗಳು ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ತಂಡವು ಕೊನೆಯ 33 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 35 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ 7 ಎಸೆತಗಳಲ್ಲಿ 7 ರನ್ ಬಾರಿಸಿದರೆ, ಮಾರ್ಕ್‌ರಮ್ 11 ಎಸೆತಗಳಲ್ಲಿ 10 ರನ್ ಗಳಿಸಿದರು. ಇನ್ನು ಸ್ಪೋಟಕ ಬ್ಯಾಟಿಂಗ್ ನಡೆಸುವ ಡೇವಿಡ್ ಮಿಲ್ಲರ್ 4 ಎಸೆತಗಳಲ್ಲಿ 2 ರನ್ ಬಾರಿಸಿದರೆ, ಪಾರ್ನೆಲ್ ಕೊನೆಯ ಎರಡು ಎಸೆತ ಎದುರಿಸಿದರಾದರೂ ಖಾತೆ ತೆರೆಯಲು ಯಶಸ್ವಿಯಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 205/5
ರಿಲೇ ರೂಸೌ: 109
ಕ್ವಿಂಟನ್ ಡಿ ಕಾಕ್: 63
ಶಕೀಬ್ ಅಲ್ ಹಸನ್: 33/2
(* ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)