ಅಡಿಲೇಡ್ ಓವಲ್ ಮೈದಾನದಲ್ಲಿ ಸೆಮೀಸ್‌ನಲ್ಲಿ ಭಾರತ-ಇಂಗ್ಲೆಂಡ್ ಫೈಟ್ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆಅಡಿಲೇಡ್ ಓವಲ್‌ನಲ್ಲಿ ಟಾಸ್ ಗೆದ್ದ ತಂಡ ಒಮ್ಮೆಯೂ ಪಂದ್ಯ ಗೆದ್ದಿಲ್ಲ

ಅಡಿಲೇಡ್‌(ನ.10): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಆದರೆ ಇಂಗ್ಲೆಂಡ್ ತಂಡಕ್ಕೆ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದಿದ್ದೇ ಮುಳುವಾಗುವ ಸಾಧ್ಯತೆಯಿದೆ.

ಹೌದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಅಡಿಲೇಡ್‌ನಲ್ಲಿ ಟಾಸ್‌ ಗೆಲ್ಲೋದು ಅಪಾಯಕಾರಿ. ಈ ವಿಶ್ವಕಪ್‌ನಲ್ಲಿ ಆರೂ ಪಂದ್ಯಗಳಲ್ಲಿ ಟಾಸ್‌ ಗೆದ್ದ ತಂಡ ಸೋತಿದೆ. ಇದೀಗ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಟಾಸ್ ಗೆದ್ದಿರುವುದು ಸೋಲಿಗೆ ಕಾರಣವಾಗಲಿದೆಯೇ ಎನ್ನುವ ಕುತೂಹಲ ಜೋರಾಗಿದೆ. 

ಅಡಿಲೇಡ್ ಓವಲ್ ಮೈದಾನದಲ್ಲಿ ಇದುವರೆಗೂ 11 ಪುರುಷರ ಟಿ20 ವಿಶ್ವಕಪ್ ಪಂದ್ಯಗಳು ನಡೆದಿದ್ದು, 11 ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡವು ಸೋಲು ಅನುಭವಿಸಿದ್ದು ಅಚ್ಚರಿಯೆನಿಸಿದರೂ ಸತ್ಯ ಎನಿಸಿಕೊಂಡಿದೆ. ಇನ್ನು ಪ್ರಸಕ್ತ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 6 ಪಂದ್ಯಗಳು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದಿದ್ದು, ಆರೂ ಪಂದ್ಯದಲ್ಲೂ ಟಾಸ್ ಗೆದ್ದ ತಂಡವು ಸೋಲಿನ ಕಹಿಯುಂಡಿದೆ. ಈ ಬಾರಿ ಭಾರತ ತಂಡವು ಅಡಿಲೇಡ್ ಓವಲ್ ಮೈದಾನದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದು, ಬಾಂಗ್ಲಾದೇಶ ಎದುರು ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿ ಬೀಗಿತ್ತು. 

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌/ ರಿಷಭ್ ಪಂತ್‌, ಅಕ್ಷರ್‌ ಪಟೇಲ್, ರವಿಚಂದ್ರನ್ ಅಶ್ವಿನ್‌, ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ, ಅಶ್‌ರ್‍ದೀಪ್‌ ಸಿಂಗ್.

ಇಂಗ್ಲೆಂಡ್‌: ಜೋಸ್ ಬಟ್ಲರ್‌(ನಾಯಕ), ಅಲೆಕ್ಸ್ ಹೇಲ್ಸ್‌, ಫಿಲ್ ಸಾಲ್ಟ್‌, ಬೆನ್ ಸ್ಟೋಕ್ಸ್‌, ಹ್ಯಾರಿ ಬ್ರೂಕ್‌, ಲಿಯಾಮ್ ಲಿವಿಂಗ್‌ಸ್ಟೋನ್‌, ಮೋಯಿನ್ ಅಲಿ, ಸ್ಯಾಮ್ ಕರ್ರನ್‌, ಕ್ರಿಸ್ ವೋಕ್ಸ್‌, ಕ್ರಿಸ್ ಜೋರ್ಡನ್‌, ಆದಿಲ್ ರಶೀದ್‌.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌