* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ತಂಡ ಪ್ರಕಟ* ಮಹೇಂದ್ರ ಸಿಂಗ್ ಧೋನಿಗೆ ಒಲಿದ ಮೆಂಟರ್ ಹುದ್ದೆ* ಮುಂಬರುವ ದಿನಗಳಲ್ಲಿ ಧೋನಿ ಟೀಂ ಇಂಡಿಯಾ ಕೋಚ್ ಆಗುವ ಸಾಧ್ಯತೆ
ನವದೆಹಲಿ(ಸೆ.09): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎಂ.ಎಸ್.ಧೋನಿಯನ್ನು ಭಾರತ ಕ್ರಿಕೆಟ್ ತಂಡದ ತಂಡದ ಮೆಂಟರ್(ಸಲಹೆಗಾರ) ಆಗಿ ನೇಮಕ ಮಾಡಿರುವುದು ವಿಶ್ವ ಕ್ರಿಕೆಟ್‌ಗೆ ಅಚ್ಚರಿ ಮೂಡಿಸಿದೆ. ಈ ಆಯ್ಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.
ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಧೋನಿ ಉಪಸ್ಥಿತಿ ತಂಡಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಧೋನಿ ಈಗಾಗಲೇ ಯುಎಇನಲ್ಲಿದ್ದು ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಧೋನಿಗೆ ಅಲ್ಲಿನ ಪಿಚ್, ವಾತಾವರಣದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ. ಹೀಗಾಗಿ ತಂಡದ ಆಯ್ಕೆ ಸೇರಿ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸ್ವತಃ ವಿರಾಟ್ ಕೊಹ್ಲಿ ಅನೇಕ ಸನ್ನಿವೇಶಗಳಲ್ಲಿ ಧೋನಿಯ ಸಲಹೆ ಪಡೆದಿರುವುದನ್ನು ನೋಡಿದ್ದೇವೆ. ಹೀಗಾಗಿ, ಧೋನಿ ನೇಮಕದ ಹಿಂದೆ ಕೊಹ್ಲಿಯ ಪಾತ್ರ ಇದ್ದೇ ಇರಲಿದೆ.
ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಎಂ.ಎಸ್. ಧೋನಿ ಮೆಂಟರ್!
ಇದೆಲ್ಲಕ್ಕಿಂತ ಮುಖ್ಯವಾಗಿ ಟಿ20 ವಿಶ್ವಕಪ್ ಬಳಿಕ ತಂಡದ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಯುವುದು ಅನುಮಾನ ಎಂದು ಈ ಹಿಂದೆಯೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗಾಗಿ, ಶಾಸ್ತ್ರಿ ಬಳಿಕ ಧೋನಿ ಭಾರತ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಳ್ಳಬಹುದು ಎನ್ನುವ ಚರ್ಚೆಯೂ ಸಾಮಾಜಿಕ ತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಕೋಚ್ ಹುದ್ದೆಯ ಮೊದಲ ಭಾಗವಾಗಿ ಧೋನಿಯನ್ನು ಈಗ ಮೆಂಟರ್ ಆಗಿ ನೇಮಿಸಲಾಗಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.
