2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಅಹಮದಾಬಾದ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಸತತ ಎರಡನೇ ಬಾರಿ ಕಪ್ ಗೆಲ್ಲಲು ಭಾರತ ಸಜ್ಜಾಗಿದ್ದರೆ, ಕಿವೀಸ್ ತನ್ನ ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಉಚಿತವಾಗಿ ವೀಕ್ಷಿಸುವ ಮಾಹಿತಿಯೂ ಇಲ್ಲಿದೆ.

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಮಣಿಸಿದ ಆತಿಥೇಯ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಎರಡು ತಂಡಗಳು ಇದೀಗ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿವೆ.

Add Asianetnews Kannada as a Preferred SourcegooglePreferred

ಒಂದು ಕಡೆ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಸತತ ಎರಡನೇ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಲು ಎದುರು ನೋಡುತ್ತಿದೆ. ಇನ್ನೊಂದು ಕಡೆ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಜಯಿಸಲು ತುದಿಗಾಲಿನಲ್ಲಿ ನಿಂತಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಸೂಪರ್ ಸಂಡೆಯಲ್ಲಿಂದು ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇನ್ನು ಹೈವೋಲ್ಟೇಜ್ ಮ್ಯಾಚ್ ಫ್ರೀ ಆಗಿ ಟಿವಿಯಲ್ಲಿ ವೀಕ್ಷಿಸಬಹುದು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಇಂಡೋ-ಕಿವೀಸ್ ಟಿ20 ವಿಶ್ವಕಪ್ ಫೈನಲ್ ಎಷ್ಟು ಗಂಟೆಯಿಂದ ಆರಂಭ?

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ ಆರಂಭವಾಗಲಿದೆ. ಹೌದು, ಇಂದು ಸಂಜೆ 7 ಗಂಟೆಯಿಂದ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಅಧಿಕೃತವಾಗಿ ಆರಂಭವಾಗಲಿದೆ. ಇದಕ್ಕೂ ಅರ್ಧಗಂಟೆ ಮೊದಲು ಅಂದರೆ ಭಾರತೀಯ ಕಾಲಮಾನ ಇಂದು ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಟಾಸ್‌ಗೂ ಮೊದಲು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪಾಪ್ ಸ್ಟಾರ್‌ ರಿಕಿ ಮಾರ್ಟಿನ್ ಸಂಗೀತ ಕಾರ್ಯಕ್ರಮ ಕೂಡಾ ಇರಲಿದೆ.

ಭಾರತದಲ್ಲಿ ಯಾವೆಲ್ಲಾ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು?

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಪಡೆದುಕೊಂಡಿದೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವಿಶ್ವಕಪ್ ಫೈನಲ್ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು. ಇನ್ನು ಇದಷ್ಟೇ ಅಲ್ಲದೇ ಓಟಿಟಿ ಫ್ಲಾಟ್ಸ್‌ಫಾರ್ಮ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ಎರಡು ವಾಹಿನಿಯಲ್ಲಿ ವೀಕ್ಷಿಸಲು ನೀವು ಹಣ ಪಾವತಿಸಿ ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿರಬೇಕಾಗುತ್ತದೆ.

ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಫೈನಲ್ ಉಚಿತವಾಗಿ ಹೇಗೆ ವೀಕ್ಷಿಸಬಹುದು?

ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಉಚಿತವಾಗಿಯೂ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ನೀವು ಯಾವುದೇ ಸಬ್‌ಸ್ಕ್ರಿಪ್ಷನ್ ಇಲ್ಲದೆಯೂ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ನೀವು ಡಿಡಿ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಉಚಿತವಾಗಿ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಇದು ಸಾಧ್ಯವಾಗಬೇಕಿದ್ದರೇ ನಿಮ್ಮ ಮನೆಯಲ್ಲಿ ಡಿಡಿ ಫ್ರೀ ಡಿಷ್ ಹೊಂದಿರಬೇಕಾಗುತ್ತದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್‌ ಕಿಶನ್, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್(ನಾಯಕ), ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್, ಅರ್ಶ್‌ದೀಪ್‌ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್‌ ಚಕ್ರವರ್ತಿ/ಮೊಹಮ್ಮದ್ ಸಿರಾಜ್‌/ಕುಲ್ದೀಪ್‌ ಯಾದವ್.

ನ್ಯೂಜಿಲೆಂಡ್‌: ಟಿಮ್ ಸೀಫರ್ಟ್‌, ಫಿನ್ ಆ್ಯಲೆನ್‌, ರಚಿನ್‌ ರವೀಂದ್ರ, ಗ್ಲೆನ್‌ ಫಿಲಿಪ್ಸ್‌, ಮಾರ್ಕ್‌ ಚಾಪ್ಮನ್‌, ಡ್ಯಾರಿಲ್‌ ಮಿಚೆಲ್, ಮಿಚೆಲ್ ಸ್ಯಾಂಟ್ನರ್‌(ನಾಯಕ), ಕೋಲ್‌ ಮೆಕಾಂಚಿ, ಜೇಮ್ಸ್ ನೀಶಮ್‌/ಜೇಕಬ್ ಡಫಿ, ಮ್ಯಾಟ್‌ ಹೆನ್ರಿ, ಲಾಕಿ ಫರ್ಗ್ಯೂಸನ್‌.

ಪಂದ್ಯ ಆರಂಭ: ಸಂಜೆ 7 ಗಂಟೆಗೆ