* ದುಬೈ ಮೈದಾನದಲ್ಲಿಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಮುಖಾಮುಖಿ* ಅಗ್ರಸ್ಥಾನಕ್ಕೇರಲು 2 ತಂಡಗಳ ನಡುವೆ ಪೈಪೋಟಿ* ಹೈವೋಲ್ಟೇಜ್‌ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ

ದುಬೈ(ಅ.30): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ (Australia Cricket Team) ಹಾಗೂ ಇಂಗ್ಲೆಂಡ್ ತಂಡಗಳು (England Cricket Team) ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಈ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮಿಚೆಲ್ ಮಾರ್ಶ್ ಬದಲಿಗೆ ಆಸ್ಟನ್ ಅಗರ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

T20 World Cup: ಪಂದ್ಯ ಗೆದ್ದ ಶಾಹಿದ್ ಅಫ್ರಿದಿಗೆ ಸೆಲ್ಯೂಟ್ ಹೊಡೆದ ಶೋಯೆಬ್ ಮಲಿಕ್..!

ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್‌ 1ರಿಂದ ಸೆಮಿಫೈನಲ್‌ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳೆಂದು ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಕಾದಾಟ ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ತಲಾ 2 ಪಂದ್ಯಗಳನ್ನಾಡಿದ್ದು, ಎರಡು ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿವೆ. ನೆಟ್‌ ರನ್‌ರೇಟ್‌ ಆಧಾರದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಡೇವಿಡ್‌ ವಾರ್ನರ್‌, ಆರೋನ್‌ ಫಿಂಚ್, ಅವರ ಮೇಲೆ ಅವಲಂಭಿತವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸ್ಟೋನಿಸ್ ಅಬ್ಬರಿಸುವ ಸಾಧ್ಯತೆಯಿದೆ. ಇನ್ನು ಇಂಗ್ಲೆಂಡ್ ತಂಡವು ಈಗಾಗಲೇ ಹಾಲಿ ಚಾಂಪಿಯನ್ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದ ಸುಲಭ ಗೆಲುವು ದಾಖಲಿಸಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ, ಜೇಸನ್‌ ರಾಯ್, ಜಾನಿ ಬೇರ್‌ಸ್ಟೋವ್, ಜೋಸ್ ಬಟ್ಲರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕ ಕೂಡಾ ಸಾಕಷ್ಟು ಬಲಿಷ್ಠವಾಗಿದೆ. ಇನ್ನು ಜೋಪ್ರಾ ಆರ್ಚರ್‌ ಅನುಪಸ್ಥಿತಿಯಲ್ಲೂ, ಕ್ರಿಸ್‌ ವೋಕ್ಸ್‌, ಟೈಮಲ್ ಮಿಲ್ಸ್‌, ಮೋಯಿನ್ ಅಲಿ, ಆದಿಲ್ ರಶೀದ್ ಮಿಂಚಿನ ದಾಳಿ ನಡೆಸುತ್ತಿರುವುದು ಮಾರ್ಗನ್ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ನಗೆ ಬೀರಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ. 

ತಂಡಗಳು ಹೀಗಿವೆ

ಆಸ್ಟ್ರೇಲಿಯಾ

ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಆಸ್ಟನ್ ಏಗರ್, ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್‌

ಇಂಗ್ಲೆಂಡ್:

ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲಾನ್, ಜಾನಿ ಬೇರ್‌ಸ್ಟೋವ್, ಇಯಾನ್ ಮಾರ್ಗನ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಮೋಯಿನ್ ಅಲಿ, ಕ್ರಿಸ್ ವೋಕ್ಸ್‌, ಕ್ರಿಸ್ ಜೋರ್ಡನ್‌, ಆದಿಲ್ ರಶೀದ್‌, ಟೈಮಲ್ ಮಿಲ್ಸ್‌ 

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌