ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ, ಆದರೆ..? ಅಚ್ಚರಿಯ ಹೇಳಿಕೆ ನೀಡಿ ಟ್ರೋಲ್ ಆದ ಶಕೀಬ್ ಅಲ್ ಹಸನ್!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ-ಭಾರತ ಫೈಟ್
ಭಾರತದೆದುರಿನ ಪಂದ್ಯಕ್ಕೂ ಮುನ್ನ ಅಚ್ಚರಿಯ ಹೇಳಿಕೆ ನೀಡಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್
ಅಚ್ಚರಿ ಹೇಳಿಕೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಬಾಂಗ್ಲಾ ನಾಯಕ
ಅಡಿಲೇಡ್(ನ.02): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿಂದು ಬಾಂಗ್ಲಾದೇಶ ಹಾಗೂ ಭಾರತ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವರ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಅಕ್ಟೋಬರ್ 02ರಂದು ನಡೆಯಲಿರುವ ಪಂದ್ಯವು ಸೆಮೀಸ್‌ಗೇರುವ ದೃಷ್ಟಿಯಿಂದ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯದಲ್ಲಿನ ಗೆಲುವು ಅನಿವಾರ್ಯ ಎನಿಸಿಕೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಸೋಲು ಅನುಭವಿಸುವ ಮೂಲಕ ಆಘಾತ ಅನುಭವಿಸಿದ್ದು, ಇದೀಗ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಇದೀಗ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಬಾಂಗ್ಲಾದೇಶ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ರೇಸ್‌ನಲ್ಲಿಲ್ಲ ಎಂದು ಸ್ವತಃ ತಂಡದ ನಾಯಕ ಶಕೀಬ್ ಅಲ್ ಹಸನ್ ಅಚ್ಚರಿಯ ಹೇಳಿಕೆ ನೀಡಿದ್ದು, ಭಾರತ ಟ್ರೋಫಿ ಗೆಲ್ಲಲು ಬಂದಿದೆ ಎಂದಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಇಲ್ಲಿಗೆ ವಿಶ್ವಕಪ್ ಗೆಲ್ಲಲು ಬಂದಿಲ್ಲ. ಆದರೆ ಭಾರತ ಕಪ್ ಗೆಲ್ಲಲೆಂದೇ ಬಂದಿದೆ. ನಾವು ಭಾರತವನ್ನು ಸೋಲಿಸಿದರೆ ಅಚ್ಚರಿ ಫಲಿತಾಂಶ ಎನಿಸಿಕೊಳ್ಳಲಿದೆ. ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್’ ಎಂದಿದ್ದಾರೆ.
T20 World Cup ಬಾಂಗ್ಲಾ ಚಾಲೆಂಜ್ ಗೆಲ್ಲುತ್ತಾ ಟೀಂ ಇಂಡಿಯಾ
ಭಾರತ ತಂಡವು ವಿಶ್ವಕಪ್ ಟಿ20 ಟೂರ್ನಿಯನ್ನಾಡಲು ಆಸ್ಟ್ರೇಲಿಯಾಗೆ ಬಂದಿಳಿಯುವ ಮುನ್ನ ತವರಿನಲ್ಲಿ ನಡೆದ ಎರಡು ಟಿ20 ಸರಣಿಯನ್ನು ಭಾರತ ಗೆದ್ದು ಬೀಗಿತ್ತು. ಮೊದಲಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದ ಕೂಡಾ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತ್ತು.
ಇನ್ನು ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಸ್ವತಃ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚರಿಯನ್ನುಂಟು ಮಾಡಿದೆ. ಅಯ್ಯೋ ದೇವರೇ, ಶಕೀಬ್ ಅಲ್ ಹಸನ್ ಹೇಳಿಕೆ ಕೇಳಿ ಅಚ್ಚರಿ ಎನಿಸಿತ್ತು. ಒಂದು ದೇಶದ ನಾಯಕನಾಗಿ ಈ ರೀತಿಯ ಹೇಳಿಕೆ ನೀಡುವುದಕ್ಕಿಂತ ಕ್ರಿಕೆಟ್ ಆಡುವುದನ್ನು ಬಿಡುವುದು ಲೇಸು ಎಂದು ಓರ್ವ ನೆಟ್ಟಿಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಕೀಬ್ ಅಲ್ ಹಸನ್ ಅವರ ಈ ಮಾತು ಒಂದು ರೀತಿ ಪಿಕ್ನಿಕ್ ಮಾಡಲು ಬಂದಿದ್ದೇವೆ ಎಂಬಂತಿದೆ ಎಂದು ಓರ್ವ ನೆಟ್ಟಿಗ ಲೇವಡಿ ಮಾಡಿದ್ದರೇ, ಮತ್ತೊಬ್ಬ ನೆಟ್ಟಿಗ, ಆಡುವುದಕ್ಕಿಂತ ಮುಂಚೆಯೇ ಈತ ಸೋಲೊಪ್ಪಿಕೊಂಡಿದ್ದಾನೆ ಎಂದು ಹಾಸ್ಯ ಮಾಡಿದ್ದಾರೆ.