ನೆದರ್‌ಲೆಂಡ್ಸ್ ಎದುರು ಆಘಾತಕಾರಿ ಸೋಲು ಅನುಭವಿಸಿದ ದಕ್ಷಿಣ ಆಫ್ರಿಕಾಸೂಪರ್ 12 ಹಂತದಲ್ಲೇ ದಕ್ಷಿಣ ಆಫ್ರಿಕಾ ಅಭಿಯಾನ ಅಂತ್ಯದಕ್ಷಿಣ ಆಫ್ರಿಕಾ ಸೋಲಿನೊಂದಿಗೆ ಟೀಂ ಇಂಡಿಯಾ ಅಧಿಕೃತವಾಗಿ ಸೆಮೀಸ್‌ಗೆ ಲಗ್ಗೆ

ಅಡಿಲೇಡ್‌(ನ.06): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ದಿನವೂ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ನೆದರ್‌ಲೆಂಡ್ಸ್ ವಿರುದ್ದ ದಕ್ಷಿಣ ಆಫ್ರಿಕಾ ತಂಡವು 13 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಸೂಪರ್ 12 ಹಂತದಲ್ಲಿಯೇ ಹೊರಬಿದ್ದಿದ್ದು, ಟೀಂ ಇಂಡಿಯಾ ಅಧಿಕೃತವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ನೆದರ್‌ಲೆಂಡ್ಸ್‌ ನೀಡಿದ್ದ 159 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಗಿದೆ. 

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನೆದರ್‌ಲೆಂಡ್ಸ್‌ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ತೆಂಬ ಬವುಮಾ 20 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ತಂಡವು 39 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. 

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಲೇ ರೂಸೌ ಹಾಗೂ ಏಯ್ಡನ್ ಮಾರ್ಕ್‌ರಮ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಆದರೆ ಈ ಇಬ್ಬರು ಬ್ಯಾಟರ್‌ಗಳು ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ರಿಲೇ ರೂಸೌ 19 ಎಸೆತಗಳಲ್ಲಿ 2 ಬೌಂಡರಿ ಸಹಿತ 25 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಏಯ್ಡನ್‌ ಮಾರ್ಕ್‌ರಮ್‌ 13 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್‌ ಮಿಲ್ಲರ್ ಕೂಡಾ 17 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಹೆನ್ರಿಚ್ ಕ್ಲಾಸೆನ್‌ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

ಕೊನೆಯ 3 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ವಿಕೆಟ್ ಪತನದೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಸೋಲಿನತ್ತ ಮುಖಮಾಡಿತು. ಕೊನೆಯ 2 ಓವರ್‌ಗಳಲ್ಲಿ 36 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 10 ರನ್ ಗಳಿಸಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ಹರಿಣಗಳ ಪಡೆ 26 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನಲ್ಲಿ ಹರಿಣಗಳ ಪಡೆ 12 ರನ್ ಗಳಿಸಲಷ್ಟೇ ಶಕ್ತವಾಯಿತು.

T20 World Cup: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ನೆದರ್‌ಲೆಂಡ್ಸ್‌

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ ಮಾಡಲಿಳಿದ ನೆದರ್‌ಲೆಂಡ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತ್ತು. ಮೈಬರ್ಗ್‌(37), ಮ್ಯಾಕ್ಸ್ ಒ'ಡೌಡ್(29), ಟಾಮ್ ಕೂಪರ್(35) ಹಾಗೂ ಕಾಲಿನ್ ಅಕರ್‌ಮನ್‌ ಅಜೇಯ 41 ರನ್ ಬಾರಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

Scroll to load tweet…

ಟೀಂ ಇಂಡಿಯಾ ಸೆಮೀಸ್‌ಗೆ ಲಗ್ಗೆ: ಇನ್ನು ನೆದರ್‌ಲೆಂಡ್ಸ್ ಎದುರು ದಕ್ಷಿಣ ಆಫ್ರಿಕಾ ತಂಡವು ಸೋಲು ಅನುಭವಿಸುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ತಂಡವು ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ. ಇನ್ನು ಇದೇ ವೇಳೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಧಿಕೃತವಾಗಿ ಗ್ರೂಪ್ 2 ನಿಂದ ಸೆಮೀಸ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಭಾರತ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 1 ಸೋಲಿನೊಂದಿಗೆ 6 ಅಂಕಗಳನ್ನು ಗಳಿಸಿದ್ದು, ಅಧಿಕೃತವಾಗಿ ಸೆಮೀಸ್‌ಗೇರಿದೆ. ಇನ್ನು 5 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡವು ತನ್ನ ಅಭಿಯಾನ ಮುಗಿಸಿದೆ. ಇದೀಗ ಗ್ರೂಪ್ 2ನಲ್ಲಿ ಸೆಮೀಸ್‌ಗೇರಲು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳಿಗೆ ಸಮಾನ ಅವಕಾಶವಿದ್ದು, ಗೆಲುವು ಸಾಧಿಸುವ ತಂಡವು ಸೆಮೀಸ್ ಪ್ರವೇಶಿಸಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ ನೆಟ್‌ ರನ್‌ರೇಟ್ ಆಧಾರದಲ್ಲಿ ಪಾಕಿಸ್ತಾನ ತಂಡವು 5 ಅಂಕಗಳೊಂದಿಗೆ ಸೆಮೀಸ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕಾ ಕೂಡಾ 5 ಅಂಕ ಹೊಂದಿದ್ದರೂ ಸಹಾ, ಪಾಕಿಸ್ತಾನ ತಂಡದ ನೆಟ್‌ ರನ್‌ರೇಟ್ ಉತ್ತಮವಾಗಿರುವುದರಿಂದಾಗಿ ಪಾಕ್‌ಗೆ ಉತ್ತಮ ಅವಕಾಶವಿದೆ.