T20 World Cup: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ನೆದರ್‌ಲೆಂಡ್ಸ್
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾಗಿಂದು ಮಾಡು ಇಲ್ಲವೇ ಮಡಿ ಪಂದ್ಯ
* ಮೊದಲು ಬ್ಯಾಟ್ ಮಾಡಿ 158 ರನ್ ಕಲೆಹಾಕಿದ ನೆದರ್‌ಲೆಂಡ್ಸ್ ತಂಡ
* ಸೆಮೀಸ್ ಪ್ರವೇಶಿಸಲು ದಕ್ಷಿಣ ಆಫ್ರಿಕಾಗೆ ಬೇಕಿದೆ 159 ರನ್‌ಗಳ ಗುರಿ
ಅಡಿಲೇಡ್(ನ.06): ಅಗ್ರಕ್ರಮಾಂಕದ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ನೆದರ್‌ಲೆಂಡ್ಸ್ ತಂಡವು ಗ್ರೂಪ್ ಹಂತದ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿದ್ದು, ತೆಂಬ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪಾಲಿಗಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಲಿಳಿದ ನೆದರ್‌ಲೆಂಡ್ಸ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಸ್ಟಿಫನ್ ಮೈಬರ್ಗ್ ಹಾಗೂ ಮ್ಯಾಕ್ಸ್ ಒ'ಡೌಡ್ 8.3 ಓವರ್‌ಗಳಲ್ಲಿ 58 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಏಯ್ಡನ್ ಮಾರ್ಕ್‌ರಮ್ ಯಶಸ್ವಿಯಾದರು. ಸ್ಟಿಫನ್ ಮೈಬರ್ಗ್ 30 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಮ್ಯಾಕ್ಸ್ ಒ'ಡೌಡ್ 29 ರನ್ ಬಾರಿಸಿ ಕೇಶವ್ ಮಹರಾಜ್‌ಗೆ ವಿಕೆಟ್ ಒಪ್ಪಿಸಿದರು.
ಸ್ಪೋಟಕ ಬ್ಯಾಟಿಂಗ್ ನಡೆಸಿದ ಕೂಪರ್-ಅಕರ್‌ಮನ್: ಉತ್ತಮ ಆರಂಭ ಪಡೆದ ನೆದರ್‌ಲೆಂಡ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಟಾಮ್ ಕೂಪರ್ ಹಾಗೂ ಕಾಲಿನ್ ಅಕರ್‌ಮನ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ಟಾಮ್ ಕೂಪರ್ ಕೇವಲ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 35 ರನ್ ಬಾರಿಸಿ ಕೇಶವ್ ಮಹರಾಜ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕಾಲಿನ್ ಅಕೆರ್‌ಮನ್ ಕೇವಲ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 41 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
T20 World Cup: ಇಂದು 3 ಪಂದ್ಯ, 4 ತಂಡಗಳ ಭವಿಷ್ಯ ನಿರ್ಧಾರ..!
ದಕ್ಷಿಣ ಆಫ್ರಿಕಾ ತಂಡದ ಪರ ಕೇಶವ್ ಮಹರಾಜ್ 2 ವಿಕೆಟ್ ಪಡೆದರೆ, ಏನ್ರಿಚ್ ನೊಕಿಯ ಹಾಗೂ ಏಯ್ಡನ್ ಮಾರ್ಕ್‌ರಮ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. ದಕ್ಷಿಣ ಆಫ್ರಿಕಾದ ತ್ರಿವಳಿ ವೇಗಿಗಳಾದ ಕಗಿಸೋ ರಬಾಡ, ವೇಯ್ನ್ ಪಾರ್ನೆಲ್ ಹಾಗೂ ಲುಂಗಿ ಎಂಗಿಡಿ ಕೊಂಚ ದುಬಾರಿ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾಗೆ ಮಾಡು ಇಲ್ಲವೇ ಮಡಿ ಪಂದ್ಯ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡುತ್ತಿರುವ ದ.ಆಫ್ರಿಕಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೆದರ್ಲೆಂಡ್‌್ಸ ವಿರುದ್ಧ ಸೆಣಸಾಡುತ್ತಿದೆ. ಗುಂಪು 1ರಲ್ಲಿ ಸದ್ಯ 5 ಅಂಕದೊಂದಿಗೆ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ‍್ಯ ಎನಿಸಿಕೊಂಡಿದೆ. ಜಿಂಬಾಬ್ವೆ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ್ದು ದ.ಆಫ್ರಿಕಾವನ್ನು ಈ ಪರಿಸ್ಥಿತಿಗೆ ತಲುಪಿಸಿದೆ. ಬಳಿಕ ಬಾಂಗ್ಲಾದೇಶ ಹಾಗೂ ಭಾರತಕ್ಕೆ ಸೋಲುಣಿಸಿದ್ದ ತಂಡ ನಿರ್ಣಾಯಕ ಘಟ್ಟದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಈ ಪಂದ್ಯದ ಗೆಲುವು ತಂಡದ ಅಳಿವು ಉಳಿವನ್ನು ನಿರ್ಧರಿಸಲಿದೆ.