ಐರ್ಲೆಂಡ್ ಎದುರು 42 ರನ್‌ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಫಿಂಚ್ ಪಡೆಈ ಸೋಲಿನೊಂದಿಗೆ ಐರ್ಲೆಂಡ್ ತಂಡದ ಸೆಮೀಸ್ ಕನಸು ಭಗ್ನ

ಬ್ರಿಸ್ಬೇನ್(ಅ.31) ಲಾರ್ಕನ್ ಟಕ್ಕರ್ ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ, ಆಸ್ಟ್ರೇಲಿಯಾದ ಸಂಘಟಿತ ಬೌಲಿಂಗ್ ಪ್ರದರ್ಶನದೆದುರು ಐರ್ಲೆಂಡ್ ತಂಡವು 42 ರನ್‌ಗಳ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ನೀಡಿದ್ದ 180 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 137 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲಿನ ಕಹಿಯುಂಡಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡದ ಸೆಮೀಸ್ ಆಸೆ ಜೀವಂತವಾಗುಳಿದರೆ, ಐರ್ಲೆಂಡ್ ತಂಡದ ಸೆಮೀಸ್ ಕನಸು ಅಧಿಕೃತವಾಗಿ ಭಗ್ನವಾಗಿದೆ.

ಇಲ್ಲಿನ ದ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ನೀಡಿದ್ದ 180 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು, ಕಾಂಗರೂಗಳ ಪಡೆಯ ಮಾರಕ ದಾಳಿಗೆ ಆರಂಭದಲ್ಲೇ ತತ್ತರಿಸಿ ಹೋಯಿತು. ಐರ್ಲೆಂಡ್ ತಂಡವು 25 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ನಾಯಕ ಆಂಡ್ರ್ಯೂ ಬಲ್ಬ್ರೈನ್‌ 6 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರೆ, ಮೂರನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೋರ್ವ ಆರಂಭಿಕ ಬ್ಯಾಟರ್ ಪೌಲ್ ಸ್ಟರ್ಲಿಂಗ್ ಹಾಗೂ ಹ್ಯಾರಿ ಟೆಕ್ಟರ್ ಅವರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು 4ನೇ ಓವರ್‌ನಲ್ಲಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ ಕೂಡಾ ಒಂದೇ ಓವರ್‌ನಲ್ಲಿ ಕರ್ಟಿಸ್ ಕ್ಯಾಂಪರ್ ಹಾಗೂ ಜಾರ್ಜ್‌ ಡಾಕ್ರೆಲ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

Scroll to load tweet…

ಲಾರ್ಕನ್ ಟಕ್ಕರ್ ಕೆಚ್ಚೆದೆಯ ಹೋರಾಟ ವ್ಯರ್ಥ: ಒಂದು ಹಂತದಲ್ಲಿ ಕೇವಲ 25 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿದ್ದ ಐರ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸುವಂತ ಆಟ ಆಡುವಲ್ಲಿ ಲಾರ್ಕನ್ ಟಕ್ಕರ್ ಯಶಸ್ವಿಯಾದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದಾಗ, ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಲಾರ್ಕನ್ ಟಕ್ಕರ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ವಿಕೆಟ್ ಕೀಪರ್‌ ಬ್ಯಾಟರ್ ಲಾರ್ಕನ್ ಟಕ್ಕರ್ 48 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 71 ರನ್ ಸಿಡಿಸಿದರಾದರೂ, ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದಿದ್ದರಿಂದ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

T20 World Cup ಫಿಂಚ್ ಆಕರ್ಷಕ ಫಿಫ್ಟಿ , ಐರ್ಲೆಂಡ್‌ಗೆ ಸವಾಲಿನ ಗುರಿ

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಡೇವಿಡ್ ವಾರ್ನರ್‌ ವಿಕೆಟ್ ಕಳೆದುಕೊಂಡಿತು. ಎಡಗೈ ಸ್ಪೋಟಕ ಬ್ಯಾಟರ್‌ ವಾರ್ನರ್, ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಡೇವಿಡ್ ವಾರ್ನರ್ 7 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಬಾರಿಸಿ ಮೆಕ್‌ಕ್ಯಾರ್ಥಿಗೆ ವಿಕೆಟ್‌ ಒಪ್ಪಿಸಿದರು.

ಒಂದು ಕಡೆ ವಿಕೆಟ್ ಉರುಳಿದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಆ್ಯರೋನ್ ಫಿಂಚ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ನಾಯಕನ ಆಟವಾಡಿದರು. ಗಾಬಾ ಮೈದಾನದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಆ್ಯರೋನ್ ಫಿಂಚ್, 44 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಬಾರಿಸಿ ಮೆಕ್‌ಕ್ಯಾರ್ಥಿಗೆ ವಿಕೆಟ್ ಒಪ್ಪಿಸಿದರು.

ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ 4ನೇ ವಿಕೆಟ್‌ಗೆ ಫಿಂಚ್ ಹಾಗೂ ಸ್ಟೋನಿಸ್ ಚುರುಕಿನ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಸ್ಟೋನಿಸ್ ಕೇವಲ 25 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ಟಿಮ್ ಡೇವಿಡ್ 15 ಹಾಗೂ ಮ್ಯಾಥ್ಯೂ ವೇಡ್ 7 ರನ್ ಬಾರಿಸಿ ಉಪಯುಕ್ತ ರನ್ ಕಾಣಿಕೆ ನೀಡಿದರು.