T20 World Cup ಫಿಂಚ್ ಆಕರ್ಷಕ ಫಿಫ್ಟಿ , ಐರ್ಲೆಂಡ್‌ಗೆ ಸವಾಲಿನ ಗುರಿ
ಐರ್ಲೆಂಡ್ ಎದುರು ಸವಾಲಿನ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ
ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದ ನಾಯಕ ಆ್ಯರೋನ್ ಫಿಂಚ್
ಐರ್ಲೆಂಡ್ ತಂಡಕ್ಕೆ 180 ರನ್‌ಗಳ ಕಠಿಣ ಗುರಿ
ಬ್ರಿಸ್ಬೇನ್(ಅ.31): ನಾಯಕ ಆ್ಯರೋನ್ ಫಿಂಚ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿದ್ದು, ಐರ್ಲೆಂಡ್ ತಂಡಕ್ಕೆ ಕಠಿಣ ಗುರಿ ನೀಡಿದೆ. ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ.
ಇಲ್ಲಿನ ಗಾಬಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಎಡಗೈ ಸ್ಪೋಟಕ ಬ್ಯಾಟರ್ ವಾರ್ನರ್, ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಡೇವಿಡ್ ವಾರ್ನರ್ 7 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಬಾರಿಸಿ ಮೆಕ್‌ಕ್ಯಾರ್ಥಿಗೆ ವಿಕೆಟ್ ಒಪ್ಪಿಸಿದರು.
ಫಿಂಚ್-ಮಾರ್ಶ್ ಜುಗಲ್ಬಂದಿ: 8 ರನ್‌ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ವಿಕೆಟ್‌ಗೆ ಮಿಚೆಲ್ ಮಾರ್ಶ್ ಹಾಗೂ ಆ್ಯರೋನ್ ಫಿಂಚ್ ಜೋಡಿ 52 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಮಾರ್ಶ್ 22 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಬಾರಿಸಿ ಮೆಕ್‌ಕ್ಯಾರ್ಥಿಗೆ ಎರಡನೇ ಬಲಿಯಾದರು.
ಫಿಂಚ್ ಆಕರ್ಷಕ ಫಿಫ್ಟಿ: ಒಂದು ಕಡೆ ವಿಕೆಟ್ ಉರುಳಿದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಆ್ಯರೋನ್ ಫಿಂಚ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ನಾಯಕನ ಆಟವಾಡಿದರು. ಗಾಬಾ ಮೈದಾನದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಆ್ಯರೋನ್ ಫಿಂಚ್, 44 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಬಾರಿಸಿ ಮೆಕ್‌ಕ್ಯಾರ್ಥಿಗೆ ವಿಕೆಟ್ ಒಪ್ಪಿಸಿದರು.
T20 World Cup ಆಸ್ಟ್ರೇಲಿಯಾ ಎದುರು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆಯ್ಕೆ
ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ 4ನೇ ವಿಕೆಟ್‌ಗೆ ಫಿಂಚ್ ಹಾಗೂ ಸ್ಟೋನಿಸ್ ಚುರುಕಿನ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಸ್ಟೋನಿಸ್ ಕೇವಲ 25 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ಟಿಮ್ ಡೇವಿಡ್ 15 ಹಾಗೂ ಮ್ಯಾಥ್ಯೂ ವೇಡ್ 7 ರನ್ ಬಾರಿಸಿ ಉಪಯುಕ್ತ ರನ್ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 179/5
ಆ್ಯರೋನ್ ಫಿಂಚ್: 63
ಮಾರ್ಕಸ್ ಸ್ಟೋನಿಸ್: 35
ಬ್ಯಾರಿ ಮೆಕ್‌ಕ್ಯಾರ್ಥಿ: 29/3
(* ಆಸ್ಟ್ರೇಲಿಯಾ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)