ಏಕಕಾಲದಲ್ಲಿ ಏಕದಿನ ಹಾಗೂ ಟಿ20 ಮಾದರಿಯ ವಿಶ್ವ ಚಾಂಪಿಯನ್‌ ಎನಿಸಿಕೊಂಡ ಇಂಗ್ಲೆಂಡ್‌ ತಂಡ, ಈ ಬಾರಿಯ ಟಿ20 ವಿಶ್ವಕಪ್‌ ಗೆಲುವಿನಿಂದ ಸಿಕ್ಕ ಹಣವೆಷ್ಟು, ರನ್ನರ್‌ಅಪ್‌ ಪಾಕಿಸ್ತಾನ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಎನ್ನುವ ವರದಿ ಇಲ್ಲಿದೆ.

ಮೆಲ್ಬೋರ್ನ್‌ (ನ.13): ಏಕದಿನ ಹಾಗೂ ಟಿ20 ಮಾದರಿಯಲ್ಲಿ ಏಕಕಾಲದಲ್ಲಿ ಚಾಂಪಿಯನ್‌ ಎನಿಸಿಕೊಂಡ ವಿಶ್ವದ ಮೊಟ್ಟಮೊದಲ ತಂಡ ಇಂಗ್ಲೆಂಡ್‌. ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್‌ ತಂಡ 2ನೇ ಬಾರಿಗೆ ಟಿ20 ವಿಶ್ವಕಪ್‌ ಟ್ರೋಫಿ ಜಯಿಸಿದೆ. ಪಾಕಿಸ್ತಾನದಿಂದ ಪ್ರಬಲ ಪ್ರತಿರೋಧ ಎದುರಾದರೂ, ಆಲ್ರೌಂಡರ್‌ ಆಟಗಾರ ಬೆನ್‌ ಸ್ಟೋಕ್ಸ್‌ ಮತ್ತೊಮ್ಮೆ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಗೆಲುವಿಗೆ ಕಾರಣರಾದರು. ಆಕರ್ಷಕ ಅರ್ಧಶತಕ ಬಾರಿಸಿದ ಬೆನ್‌ ಸ್ಟೋಕ್ಸ್‌ ತಂಡದ ಗೆಲುವಿಗೆ ನೆರವಾದರು. ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌ ತಂಡಕ್ಕೆ ಐಸಿಸಿಯಿಂದ 1.6 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ, 13.03 ಕೋಟಿ ರೂಪಾಯಿ ಬಹುಮಾನ ದೊರೆಯಲಿದೆ. ಇನ್ನೊಂಡೆ ರನ್ನರ್‌ಅಪ್‌ ಆಗಿರುವ ಪಾಕಿಸ್ತಾನ ತಂಡ ಐಸಿಸಿಯಿಂದ ವಿಜೇತರಿಗೆ ಸಿಗುವ ಅರ್ಧದಷ್ಟು ಮೊತ್ತ ಸಿಗಲಿದೆ. 0.8 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ 6.5 ಕೋಟಿ ರೂಪಾಯಿಯನ್ನು ಪಾಕಿಸ್ತಾನ ತಂಡ ಬಹುಮಾನವಾಗಿ ಪಡೆದುಕೊಳ್ಳಲಿದೆ. ಇನ್ನು ಸೆಮಿಫೈನಲ್‌ಲ್ಲಿ ಸೋಲು ಕಂಡಿರುವ ತಂಡಗಳಾದ ನ್ಯೂಜಿಲೆಂಡ್‌ ಹಾಗೂ ಭಾರತ ತಂಡಗಳು ಕ್ರಮವಾಗಿ 0.4 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ, 3.25 ಕೋಟಿ ರೂಪಾಯಿ ಬಹುಮಾನ ದೊರೆಯಲಿದೆ. ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಶರಣಾಗಿದ್ದರೆ, ನ್ಯೂಜಿಲೆಂಡ್‌ ತಂಡ ಪಾಕಿಸ್ತಾನದ ವಿರುದ್ಧ ಶರಣಾಗಿತ್ತು.

ಇನ್ನು ಒಟ್ಟಾರೆ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ 45 ಕೋಟಿ ರೂಪಾಯಿಯ ವೆಚ್ಚದಲ್ಲಿ ನಡೆದಿದೆ. ಸೂಪರ್‌ 12 ಹಂತದಲ್ಲಿ ನಿರ್ಗಮನ ಕಂಡ 8 ತಂಡಗಳಾದ, ಆಸ್ಟ್ರೇಲಿಯಾ, ಶ್ರೀಲಂಕಾ, ಐರ್ಲೆಂಡ್‌, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್‌, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳಿಗೆ ತಲಾ 56. 35 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಕೆಲವು ಆಘಾತಕಾರಿ ಫಲಿತಾಂಶ ದಾಖಲಾದವು. ದಕ್ಷಿಣ ಆಫ್ರಿಕಾ ವಿರುದ್ಧದ ನೆದರ್ಲೆಂಡ್‌ ಗೆಲುವು, ಲೀಗ್‌ ಹಂತದಲ್ಲಿ ಎರಡು ಸೋಲು ಕಂಡರೂ ಪಾಕಿಸ್ತಾನ ತಂಡ ಸೆಮಿಫೈನಲ್‌ ಹಂತಕ್ಕೇರಿದ್ದು ಆಘಾತಕಾರಿ ಎನಿಸಿತ್ತು. ಇನ್ನು ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌ ತಂಡವನ್ನು ಐರ್ಲೆಂಡ್‌ ಲೀಗ್‌ ಹಂತದಲ್ಲಿ ಸೋಲಿಸಿತ್ತು. ಅದೇ ವೇಳೆ ಇಂಗ್ಲೆಂಡ್‌, ಬಲಿಷ್ಠ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿ ಅಚ್ಚರಿ ಮೂಡಿಸಿತ್ತು.

ಇಂಗ್ಲೆಂಡ್‌ಗೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟೋಕ್ಸ್‌, ಪಾಕಿಸ್ತಾನಕ್ಕೆ 'ಸ್ಟ್ರೋಕ್‌'..!

ಅಂದು ವಿಲನ್‌ ಇಂದು ಹೀರೋ: 2016ರ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ಮುಖಾಮುಖಿಯಾಗಿತ್ತು. ಕೋಲ್ಕತದಲ್ಲಿ ನಡೆದ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಕಾರ್ಲೋಸ್‌ ಬ್ರಾಥ್‌ವೇಟ್‌, ಬೆನ್‌ ಸ್ಟೋಕ್ಸ್‌ಗೆ ಸತತ ನಾಲ್ಕು ಸಿಕ್ಸರ್‌ ಸಿಡಿಸಿದ್ದರು. ಅದಾದ ಆರು ವರ್ಷಗಳ ಬಳಿಕ ಬೆನ್‌ ಸ್ಟೋಕ್ಸ್‌ ಸಿಕ್ಸರ್‌ ಸಿಡಿಸಿಯೇ ತಮ್ಮ ತಂಡವನ್ನು ವಿಶ್ವ ಚಾಂಪಿಯನ್‌ ಮಾಡಿಸಿದ್ದಾರೆ. ಅಂದು ಬೌಲಿಂಗ್‌ನಲ್ಲಿ ತಂಡವನ್ನು ಮಣಿಸಿದ್ದ ಬೆನ್‌ ಸ್ಟೋಕ್ಸ್‌ ಇಂದು ಬ್ಯಾಟಿಂಗ್‌ ಮೂಲಕ ತಂಡದ ಹೀರೋ ಆಗಿದ್ದಾರೆ. ಇದರ ನಡುವೆ 2019ರ ವಿಶ್ವಕಪ್‌ ಫೈನಲ್‌ನಲ್ಲಿಯೂ ಬೆನ್‌ ಸ್ಟೋಕ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ನೆರವಾಗಿದ್ದರು.

T20 World Cup: ಪಾಕ್ ಎದುರು ಬೌಲರ್‌ಗಳ ಮಾರಕ ದಾಳಿ, ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲಲು 138 ರನ್ ಗುರಿ

ಇಂಗ್ಲೆಂಡ್‌ ವಿಶೇಷ ದಾಖಲೆ: ಏಕದಿನ (ODI) ಹಾಗೂ ಟಿ20 ವಿಶ್ವಕಪ್‌ನಲ್ಲಿ (T20 World Cup) ಏಕಕಾಲದಲ್ಲಿ ಚಾಂಪಿಯನ್‌ ಆದ ಮೊದಲ ತಂಡ ಇಂಗ್ಲೆಂಡ್‌ (England) ಎನಿಸಿಕೊಂಡಿದೆ. ಟಿ20 ವಿಶ್ವಕಪ್‌ನ ಎಲ್ಲಾ 11 ನಾಕೌಟ್‌ ಪಂದ್ಯಗಳಲ್ಲಿ ಈವರೆಗೂ ಚೇಸಿಂಗ್‌ ತಂಡವೇ ಗೆಲುವು ಕಂಡಿದೆ.