ಇಂಗ್ಲೆಂಡ್ ಟಿ20 ವಿಶ್ವಕಪ್ ಚಾಂಪಿಯನ್ ಕಿರೀಟಪಾಕಿಸ್ತಾನ ವಿರುದ್ದ 5 ವಿಕೆಟ್‌ಗಳ ಜಯ

ಮೆಲ್ಬರ್ನ್‌(ನ.13): ವಾವ್ಹ್.. ಬೆನ್ ಸ್ಟೋಕ್ಸ್‌, ವಾವ್ಹ್,, ಆಲ್ರೌಂಡರ್ ಬೆನ್ ಸ್ಟೋಕ್ಸ್ ಚಾಂಪಿಯನ್ ಆಟಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಬೆನ್ ಸ್ಟೋಕ್ಸ್‌, ಇದೀಗ ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆನ್ ಸ್ಟೋಕ್ಸ್ ಅಜೇಯ 52 ರನ್ ಬಾರಿಸಿ ಮಿಂಚಿದರು.

ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಪಾಕಿಸ್ತಾನ ನೀಡಿದ್ದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಮೊದಲ ಓವರ್‌ನಲ್ಲೇ ಅಲೆಕ್ಸ್‌ ಹೇಲ್ಸ್ ವಿಕೆಟ್ ಕಳೆದುಕೊಂಡಿತು. ಇನ್ನು ಫಿಲ್ ಸಾಲ್ಟ್‌(10) ಕೂಡಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಪಾಕ್ ವೇಗಿ ಹ್ಯಾರಿಸ್ ರೌಫ್ ಅವಕಾಶ ನೀಡಲಿಲ್ಲ. ಇನ್ನು ನಾಯಕ ಜೋಸ್ ಬಟ್ಲರ್ 26 ರನ್‌ ಬಾರಿಸಿ ಹ್ಯಾರಿಸ್ ರೌಪ್‌ಗೆ ವಿಕೆಟ್‌ ಒಪ್ಪಿಸಿದರು.

Scroll to load tweet…

ಇಂಗ್ಲೆಂಡ್‌ಗೆ ಕಪ್‌ ಗೆದ್ದು ಕೊಟ್ಟ ಸ್ಟೋಕ್ಸ್‌: ಒಂದು ಹಂತದಲ್ಲಿ 45 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಗ್ಲೆಂಡ್‌ ತಂಡಕ್ಕೆ 4ನೇ ವಿಕೆಟ್‌ಗೆ ಬೆನ್‌ ಸ್ಟೋಕ್ಸ್ ಹಾಗೂ ಹ್ಯಾರಿ ಬ್ರೂಕ್ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬ್ರೂಕ್ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಅತ್ಯಾಕರ್ಷಕ ಬ್ಯಾಟಿಂಗ್ ನಡೆಸಿದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಇಂಗ್ಲೆಂಡ್ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಬೆನ್ ಸ್ಟೋಕ್ಸ್‌ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಈ ಮೊದಲು 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಬೆನ್ ಸ್ಟೋಕ್ಸ್ ಅಜೇಯ 84 ರನ್ ಬಾರಿಸುವ ಮೂಲಕ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

T20 World Cup: ಪಾಕ್ ಎದುರು ಬೌಲರ್‌ಗಳ ಮಾರಕ ದಾಳಿ, ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲಲು 138 ರನ್ ಗುರಿ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಅನಾಯಾಸವಾಗಿ ರನ್ ಗಳಿಸಲು ಇಂಗ್ಲೆಂಡ್ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಯುವ ಎಡಗೈ ವೇಗಿ ಸ್ಯಾಮ್ ಕರ್ರನ್ 4 ಓವರ್‌ ಬೌಲಿಂಗ್‌ ಮಾಡಿ ಕೇವಲ 12 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಯಾವೊಬ್ಬ ಬ್ಯಾಟರ್ ಕೂಡಾ 40 ರನ್ ಗಳಿಸಲು ಯಶಸ್ವಿಯಾಗಲಿಲ್ಲ. ಶಾನ್ ಮಸೂದ್ 38 ರನ್ ಗಳಿಸಿದ್ದೇ ಪಾಕಿಸ್ತಾನ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.ಅಂತಿಮವಾಗಿ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು.