ಮುಷ್ತಾಕ್ ಅಲಿ ಟ್ರೋಫಿ: ಹರ್ಯಾಣ ಎದುರು ಕೊನೆ ಎಸೆತದಲ್ಲಿ ಸಿಕ್ಸ್ ಬಾರಿಸಿ ಸೆಮೀಸ್‌ಗೇರಿದ ಬರೋಡ..!

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹರ್ಯಾಣ ತಂಡವನ್ನು ರೋಚಕವಾಗಿ ಮಣಿಸಿ ಬರೋಡ ಸೆಮಿಫೈನಲ್‌ ಪ್ರವೇಶಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Syed Mushtaq Ali Trophy Vishnu Solanki unbeaten half century helps Baroda beat Haryana in Quarter Final kvn

ಅಹಮದಾಬಾದ್‌(ಜ.27): ಅಬ್ಬಾ, ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಹರ್ಯಾಣ ಹಾಗೂ ಬರೋಡ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬರೋಡ ತಂಡದ ಬ್ಯಾಟ್ಸ್‌ಮನ್‌ ವಿಷ್ಣು ಸೋಲಂಕಿ ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ತಂಡವನ್ನು ಸೆಮಿಫೈನಲ್‌ಗೇರಿಸುವಲ್ಲಿ ಯಶಸ್ವಿಯಾದರು.

ಇಲ್ಲಿನ ಸರ್ದಾರ್ ಪಟೇಲ್‌ ಕ್ರೀಡಾಂಗಣದಲ್ಲಿ ಬರೋಡ ತಂಡ ಗೆಲ್ಲಲು ಕೊನೆಯ ಓವರ್‌ನಲ್ಲಿ ಬರೋಬ್ಬರಿ 18 ರನ್‌ಗಳ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ ಕೇವಲ 3 ರನ್‌ ಗಳಿಸಿದ್ದ ಬರೋಡ, ಆ ಬಳಿಕ ವಿಷ್ಣು ಸೋಲಂಕಿ ಮೂರು ಎಸೆತಗಳಲ್ಲಿ ಕ್ರಮವಾಗಿ ಸಿಕ್ಸ್, ಬೌಂಡರಿ ಹಾಗೂ ಸಿಕ್ಸರ್‌ ನೆರವಿನಿಂದ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಹೌದು, ಸೆಮಿಫೈನಲ್‌ಗೇರಲು ಹರ್ಯಾಣ ತಂಡವು ಬರೋಡ ತಂಡಕ್ಕೆ 149 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಬರೋಡ ತಂಡಕ್ಕೆ ನಾಯಕ ಕೇದಾರ್ ದೇವ್‌ಧರ್ ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಮಿತ್ ಪಟೇಲ್‌ 33 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಸಮಿತ್ ಪಟೇಲ್‌ 21 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಕೇದಾರ್ ಬ್ಯಾಟಿಂಗ್‌ 43 ರನ್‌ಗಳಿಗೆ ಸೀಮಿತವಾಯಿತು.

ಬರೋಡ ಪಾಲಿಗೆ ದೇವರಾದ ವಿಷ್ಣು: ಬರೋಡ ತಂಡದ ಉತ್ತಮ ಆರಂಭದ ಹೊರತಾಗಿಯೂ ಡೆತ್‌ ಓವರ್‌ನಲ್ಲಿ ಹರ್ಯಾಣ ಬೌಲರ್‌ಗಳು ಶಿಸ್ತುಬದ್ದ ದಾಳಿ ನಡೆಸಿದ್ದರಿಂದ ಬರೋಡ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಛಲಬಿಡದೇ ಬ್ಯಾಟಿಂಗ್ ನಡೆಸಿದ ವಿಷ್ಣು ಸೋಲಂಕಿ 46 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 71 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಷ್ಣುವಿಗೆ ಉತ್ತಮ ಸಾಥ್ ನೀಡಿದ ಅಭಿಮನ್ಯು ರಜಪೂತ್ 13 ರನ್‌ ಬಾರಿಸಿ ಅಜೇಯರಾಗುಳಿದರು.

ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್ ಎದುರು ಹೀನಾಯ ಸೋಲುಂಡು ಟೂರ್ನಿಯಿಂದ ಹೊರಬಿದ್ದ ಕರ್ನಾಟಕ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಹರ್ಯಾಣ ತಂಡ ಆರಂಭಿಕ ಆಘಾತದ ಹೊರತಾಗಿಯೂ ಹಿಮಾಂಶು ರಾಣಾ(49) ಅರ್ಧಶತಕ ವಂಚಿತ ಬ್ಯಾಟಿಂಗ್ ಹಾಗೂ ಶಿವಂ ಚೌಹ್ಹಾಣ್‌(35) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಹರ್ಯಾಣ ತಂಡ 7 ವಿಕೆಟ್ ಕಳೆದುಕೊಂಡು 148 ರನ್‌ ಬಾರಿಸಿತ್ತು.

ಈ ಗೆಲುವಿನೊಂದಿಗೆ ಪಂಜಾಬ್‌, ತಮಿಳುನಾಡು ಹಾಗೂ ಬರೋಡ ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿವೆ. ಇಂದು ಸಂಜೆ 7 ಗಂಟೆಗೆ ಆರಂಭವಾಗಲಿರುವ ನಾಲ್ಕನೇ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಬಿಹಾರ ಹಾಗೂ ರಾಜಸ್ಥಾನ ತಂಡಗಳು ಕಾದಾಡಲಿದ್ದು, ಈ ಪೈಕಿ ಯಾವ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
 

Latest Videos
Follow Us:
Download App:
  • android
  • ios