ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್ ಎದುರು ಹೀನಾಯ ಸೋಲುಂಡು ಟೂರ್ನಿಯಿಂದ ಹೊರಬಿದ್ದ ಕರ್ನಾಟಕ
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಪಂಜಾಬ್ ಎದುರು ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಜ.26): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕದ ಹೋರಾಟ ಅಂತ್ಯವಾಗಿದೆ. ಪಂಜಾಬ್ ಎದುರಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಆಘಾತಕಾರಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಹೌದು, ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತ ಆಟವಾಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 87 ರನ್ ಬಾರಿಸುವಷ್ಟರಲ್ಲಿ ಸರ್ವಪತನ ಕಂಡಿತ್ತು. ಸುಲಭ ಗುರಿ ಬೆನ್ನತ್ತಿದ ಪಂಜಾಬ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ತಂಡ ಮೊದಲ ಓವರ್‌ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿಮ್ರನ್ ಸಿಂಗ್(49*) ಹಾಗೂ ನಾಯಕ ಮನ್ದೀಪ್ ಸಿಂಗ್(35*) ಮುರಿಯದ 85 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಪಂಜಾಬ್ ತಂಡ 2021ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿತು.
ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್‌ಗೆ ಸಾಧಾರಣ ಗುರಿ ನೀಡಿದ ಕರ್ನಾಟಕ
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪಡಿಕ್ಕಲ್(11), ಕರುಣ್ ನಾಯರ್(12), ಅನಿರುದ್ಧ್ ಜೋಶಿ(27), ಶ್ರೇಯಸ್ ಗೋಪಾಲ್(13) ಮಾತ್ರ ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ್ಯಾವ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲವಾಗಲಿಲ್ಲ.
ಪಂಜಾಬ್ ಪರ ಸಿದ್ದಾರ್ಥ್ ಕೌಲ್ 3 ವಿಕೆಟ್ ಪಡೆದು ಮಿಂಚಿದರೆ, ಸಂದೀಪ್ ಶರ್ಮಾ, ಆರ್ಶದೀಪ್ ಸಿಂಗ್, ರಮಣ್‌ದೀಪ್ ಸಿಂಗ್ ತಲಾ 2 ಹಾಗೂ ಮಯಾಂಕ್ ಮಾರ್ಕಂಡೆ ಒಂದು ವಿಕೆಟ್ ಕಬಳಿಸುವ ಕರ್ನಾಟಕದ ಪತನಕ್ಕೆ ಕಾರಣರಾದರು.