ಅಹಮದಾಬಾದ್‌(ಜ.29): ವೇಗಿ ಮೊಹಮ್ಮದ್ ಮಾರಕ ದಾಳಿ ಹಾಗೂ ಅರುಣ್ ಕಾರ್ತಿಕ್‌ ಅಜೇಯ ಅರ್ಧಶತಕದ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ದ ತಮಿಳುನಾಡು ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಹೌದು, ರಾಜಸ್ಥಾನ ನೀಡಿದ್ದ 155 ರನ್‌ಗಳ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ತಮಿಳುನಾಡು ತಂಡ ಆರಂಭದಲ್ಲೇ ಹರಿ ನಿಶಾಂತ್(4) ಹಾಗೂ ಬಾಬಾ ಅಪರಾಜಿತ್‌(2) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ತಮಿಳುನಾಡು ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್‌ ಜಗದೀಶನ್‌(28) ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಒಂದು ಹಂತದಲ್ಲಿ ತಮಿಳುನಾಡು ತಂಡ 9.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್‌ ಬಾರಿಸಿತ್ತು.

ಗೆಲುವಿನ ದಡ ಸೇರಿಸಿದ ಕಾರ್ತಿಕ್‌ ಜೋಡಿ: ಹೌದು, ನಾಲ್ಕನೇ ವಿಕೆಟ್‌ಗೆ ಜತೆಯಾದ ಅರುಣ್ ಕಾರ್ತಿಕ್‌ ಹಾಗೂ ನಾಯಕ ದಿನೇಶ್ ಕಾರ್ತಿಕ್ ಜೋಡಿ ನಾಲ್ಕನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ತಂಡ ಗೆಲುವಿನ ನಗೆ ಬೀರಿತು. ಅರುಣ್‌ ಕಾರ್ತಿಕ್‌  54 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 89 ರನ್‌ ಚಚ್ಚಿದರೆ, ನಾಯಕ ದಿನೇಶ್ ಕಾರ್ತಿಕ್‌ 26 ರನ್‌ ಬಾರಿಸಿ ಅಜೇಯರಾಗುಳಿದರು.

ಮುಷ್ತಾಕ್‌ ಅಲಿ ಟಿ20: ಇಂದು ಸೆಮೀಸ್‌ ಕಾದಾಟ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಶೋಕ್ ಮೆನೇರಿಯಾ(51) ಹಾಗೂ ಅರ್ಜಿತ್ ಗುಪ್ತಾ(45) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಆದರೆ ಕೊನೆಯಲ್ಲಿ ಮೊಹಮ್ಮದ್ ಮಾರಕ ದಾಳಿಗೆ ತತ್ತರಿಸಿದ ರಾಜಸ್ಥಾನ 9 ವಿಕೆಟ್ ಕಳೆದುಕೊಂಡು ಕೇವಲ 154 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಕಳೆದ ಆವೃತ್ತಿಯಲ್ಲಿಯೂ ತಮಿಳುನಾಡು ತಂಡ ಫೈನಲ್ ಪ್ರವೇಶಿಸಿತ್ತಾದರೂ, ಕೊನೆಯ ಕ್ಷಣದಲ್ಲಿ ಕರ್ನಾಟಕ ತಂಡದ ಎದುರು ರೋಚಕ ಸೋಲು ಕಂಡಿತ್ತು. ಈ ಆವೃತ್ತಿಯಲ್ಲಾದರೂ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.