ಮುಷ್ತಾಕ್ ಅಲಿ ಟಿ20: ಇಂದು ಸೆಮೀಸ್ ಕಾದಾಟ
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ತಮಿಳುನಾಡು ಹಾಗೂ ರಾಜಸ್ಥಾನ ತಂಡಗಳು ಕಾದಾಡಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ಬರೋಡ ತಂಡಗಳು ಸೆಣಸಾಡಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಜ.29): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಶುಕ್ರವಾರ ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮೊದಲ ಸೆಮೀಸ್‌ನಲ್ಲಿ ಕಳೆದ ವರ್ಷದ ರನ್ನರ್-ಅಪ್ ತಮಿಳುನಾಡು ಹಾಗೂ ರಾಜಸ್ಥಾನ ತಂಡಗಳು ಸೆಣಸಿದರೆ, 2ನೇ ಸೆಮಿಫೈನಲ್‌ನಲ್ಲಿ ಬರೋಡಾ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ತಮಿಳುನಾಡು ಹಾಗೂ ಪಂಜಾಬ್ ಬಲಿಷ್ಠವಾಗಿದ್ದು, ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳೆನಿಸಿವೆ.
ಫೆಬ್ರವರಿ 18ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದ್ದು, ಈ ವೇಳೆ ಫ್ರಾಂಚೈಸಿಯ ಮನಗೆಲ್ಲಲು ಯುವಪ್ರತಿಭೆಗಳು ಮಿಂಚಿನ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಬಲಿಷ್ಠ ತಮಿಳುನಾಡು ತಂಡಕ್ಕೆ ರಾಜಸ್ಥಾನದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮಹಿಪಾಲ್ ಲೋಮ್ರರ್, ಚಹರ್ ಸಹೋದರರು ಹಾಗೂ ಕಳೆದ ಐಪಿಎಲ್‌ನಲ್ಲಿ ಮಿಂಚಿದ ರವಿ ಬಿಷ್ಣೋಯಿ ಹಾಗೂ ಖಲೀಲ್ ಅಹಮ್ಮದ್ ಸವಾಲೊಡ್ಡಲು ಸಿದ್ದರಾಗಿದ್ದಾರೆ.
ಮುಷ್ತಾಕ್ ಅಲಿ ಟ್ರೋಫಿ: ಹರ್ಯಾಣ ಎದುರು ಕೊನೆ ಎಸೆತದಲ್ಲಿ ಸಿಕ್ಸ್ ಬಾರಿಸಿ ಸೆಮೀಸ್‌ಗೇರಿದ ಬರೋಡ..!
ಇನ್ನು ಇಂದು ಸಂಜೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ತಂಡವು ಬರೋಡ ಎದುರು ಕಾದಾಡಲಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಹೊಂದಿರುವ ಪಂಜಾಬ್ ತಂಡಕ್ಕೆ ಬರೋಡ ಯಾವ ರೀತಿ ಪ್ರತಿರೋಧ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.
ಪಂದ್ಯ:
ತಮಿಳುನಾಡು-ರಾಜಸ್ಥಾನ, ಮಧ್ಯಾಹ್ನ 12ಕ್ಕೆ,
ಪಂಜಾಬ್-ಬರೋಡಾ, ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್