ಮುಂಬೈ(ಜ.23): 2021ರ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ ಪ್ರಕಟಗೊಂಡಿದೆ. ಗುಂಪು ಹಂತದಲ್ಲಿ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದ ಹಾಲಿ ಚಾಂಪಿಯನ್‌ ಕರ್ನಾಟಕ, ಅದೃಷ್ಟ ಕೈಹಿಡಿದ ಕಾರಣ ಕ್ವಾರ್ಟರ್‌ಗೇರಿದೆ.

ಕರುಣ್‌ ನಾಯರ್‌ ನೇತೃತ್ವದ ತಂಡ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ, ಪಂಜಾಬ್‌ ತಂಡವನ್ನು ಸೋಲಿಸಬೇಕಿದೆ. ಕರ್ನಾಟಕ ಹಾಗೂ ಪಂಜಾಬ್‌ ಎರಡೂ ತಂಡಗಳು ‘ಎ’ ಗುಂಪಿನಲ್ಲೇ ಸ್ಥಾನ ಪಡೆದಿದ್ದವು. ಗುಂಪು ಹಂತದಲ್ಲಿ ಕರ್ನಾಟಕ, ಪಂಜಾಬ್‌ ವಿರುದ್ಧ ಮಾತ್ರ ಸೋಲು ಕಂಡಿತ್ತು. ಗುಂಪು ಹಂತ ಮುಕ್ತಾಯಗೊಂಡ 2 ದಿನಗಳ ಬಳಿಕ ಬಿಸಿಸಿಐ ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ ಪ್ರಕಟ ಮಾಡಿದ್ದು, ಯಾವ ಲೆಕ್ಕಚಾರದೊಂದಿಗೆ ವೇಳಾಪಟ್ಟಿ ಸಿದ್ಧಪಡಿಸಿದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೇರಿದ ಕರ್ನಾಟಕ

ನಾಕೌಟ್‌ ಹಂತದ ಪಂದ್ಯಗಳಿಗೆ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮೊದಲ ಜ.26ರಂದು ಮೊದಲೆರಡು ಕ್ವಾರ್ಟರ್‌ ಫೈನಲ್‌ ನಡೆದರೆ, ಜ.27ಕ್ಕೆ ಮತ್ತೆರಡು ಕ್ವಾರ್ಟರ್‌ ಫೈನಲ್‌ಗಳು ನಡೆಯಲಿವೆ. ಜ.28ಕ್ಕೆ ಸೆಮಿಫೈನಲ್‌ ಪಂದ್ಯಗಳು, ಜ.31ಕ್ಕೆ ಫೈನಲ್‌ ನಡೆಯಲಿದೆ.

ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ

ಮೊದಲ ಕ್ವಾರ್ಟರ್‌ ಫೈನಲ್‌: ಕರ್ನಾಟಕ-ಪಂಜಾಬ್‌ (ಜ.26, ಮಧ್ಯಾಹ್ನ 12ಕ್ಕೆ)

2ನೇ ಕ್ವಾರ್ಟರ್‌ ಫೈನಲ್‌: ತಮಿಳುನಾಡು-ಹಿಮಾಚಲ (ಜ.26, ಸಂಜೆ 7ಕ್ಕೆ)

3ನೇ ಕ್ವಾರ್ಟರ್‌ ಫೈನಲ್‌: ಹರ್ಯಾಣ-ಬರೋಡಾ (ಜ.27, ಮಧ್ಯಾಹ್ನ 12ಕ್ಕೆ)

4ನೇ ಕ್ವಾರ್ಟರ್‌ ಫೈನಲ್‌: ರಾಜಸ್ಥಾನ-ಬಿಹಾರ (ಜ.27, ಸಂಜೆ 7ಕ್ಕೆ)