ಬೆಂಗಳೂರು(ಜ.20): ಕರುಣ್ ನಾಯರ್ ನೇತೃತ್ವದ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಅದೃಷ್ಟ ಕೈಹಿಡಿದಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಹಾಲಿ ಚಾಂಪಿಯನ್ ತಂಡ ಪ್ರವೇಶ ಪಡೆದಿದೆ. 

‘ಎ’ ಗುಂಪಿನಲ್ಲಿದ್ದ ಕರ್ನಾಟಕ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 16 ಅಂಕಗಳನ್ನು ಸಂಪಾದಿಸಿತ್ತು. ಆದರೆ ನೆಟ್ ರನ್‌ರೇಟ್ ವಿಚಾರದಲ್ಲಿ ತಂಡ ಹಿಂದೆ ಬಿದ್ದಿತ್ತು. ಹೀಗಾಗಿ ಕರ್ನಾಟಕ ಉಳಿದ 3 ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೂರೂ ಪಂದ್ಯಗಳ ಫಲಿತಾಂಶಗಳು ರಾಜ್ಯ ತಂಡದ ಪರವಾಗಿಯೇ ಬಂದಿದ್ದು ತಂಡದ ಅದೃಷ್ಟ. 

ಮುಷ್ತಾಕ್ ಅಲಿ ಟ್ರೋಫಿ: ಉತ್ತರ ಪ್ರದೇಶವನ್ನು ಬಗ್ಗುಬಡಿದ ಕರ್ನಾಟಕ

‘ಬಿ’ ಗುಂಪಿನ ಪಂದ್ಯದಲ್ಲಿ ಬಂಗಾಳ ವಿರುದ್ಧ ತಮಿಳುನಾಡು ಜಯಗಳಿಸಬೇಕಿತ್ತು. ತಮಿಳುನಾಡು 8 ವಿಕೆಟ್‌ಗಳಿಂದ ಜಯಿಸಿತು. ‘ಸಿ’ ಗುಂಪಿನಲ್ಲಿ ಸರ್ವೀಸಸ್ ವಿರುದ್ಧ ಮಧ್ಯಪ್ರದೇಶ 2 ರನ್ ಗಳಿಂದ ಜಯಿಸಿತು. ಆದರೆ ನೆಟ್ ರನ್ ರೇಟ್‌ನಲ್ಲಿ ಕರ್ನಾ ಟಕ(0.292)ಕ್ಕಿಂತ ಹಿಂದೆ ಬಿತ್ತು. ಮಧ್ಯ ಪ್ರದೇಶ 5 ಪಂದ್ಯಗಳ ಮುಕ್ತಾಯಕ್ಕೆ 16 ಅಂಕ ಗಳಿಸಿ 0.285 ನೆಟ್ ರನ್‌ರೇಟ್ ಹೊಂದಿದೆ. ಇನ್ನು ‘ಡಿ’ ಗುಂಪಿನಲ್ಲಿ ಕೇರಳ ವಿರುದ್ಧ ಹರ್ಯಾಣ ಗೆಲ್ಲಬೇಕಿತ್ತು. ಹರ್ಯಾಣ 4 ರನ್‌ಗಳ ರೋಚಕ ಜಯ ಸಾಧಿಸಿತು. ಗುಂಪು ಹಂತದಲ್ಲಿ ಕರ್ನಾಟಕ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಕ್ವಾರ್ಟರ್‌ನಲ್ಲಿ ತಂಡದಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ.