ಚೊಚ್ಚಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಿಮಾಚಲ ಪ್ರದೇಶ-ಮುಂಬೈ ಕಾದಾಟಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಫೈನಲ್ ಪಂದ್ಯ

ಕೋಲ್ಕತಾ(ನ.06): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ಕ್ರಿಕೆಟ್ ತಂಡವು ಚೊಚ್ಚಲ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ಹಿಮಾಚಲ ಪ್ರದೇಶ ವಿರುದ್ಧ ಮುಂಬೈ 3 ವಿಕೆಟ್‌ ಗೆಲುವು ದಾಖಲಿಸಿತು. ಇದರೊಂದಿಗೆ ಹಿಮಾಚಲ ಪ್ರದೇಶದ ಚೊಚ್ಚಲ ಪ್ರಶಸ್ತಿಯ ಕನಸು ಭಗ್ನಗೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹಿಮಾಚಲ 8 ವಿಕೆಟ್‌ಗೆ 143 ರನ್‌ ಕಲೆಹಾಕಿತು. ಸಾಧಾರಣ ಆರಂಭ ಪಡೆದ ಬಳಿಕ ತಂಡ 51ರಿಂದ 58 ರನ್‌ ನಡುವೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಏಕಾಂತ್‌ ಸೇನ್‌ 37, ಆಕಾಶ್‌ ವಸಿಷ್ಟ 25 ರನ್‌ ಗಳಿಸಿದರು. ಮೋಹಿತ್‌, ತನುಶ್‌ ಕೋಟ್ಯಾನ್‌ ತಲಾ 3 ವಿಕೆಟ್‌ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈ 19.3 ಓವರಲ್ಲಿ ಗೆಲುವು ದಾಖಲಿಸಿತು. ಸರ್ಫರಾಜ್‌ ಖಾನ್‌(ಔಟಾಗದೆ 36), ಶ್ರೇಯಸ್‌ ಅಯ್ಯರ್‌(34), ಯಶಸ್ವಿ ಜೈಸ್ವಾಲ್‌(27) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೈಭವ್‌ ಅರೋರಾ 3 ವಿಕೆಟ್‌ ಕಿತ್ತರು.

Scroll to load tweet…

ಸ್ಕೋರ್‌: 
ಹಿಮಾಚಲ 20 ಓವರಲ್ಲಿ 143/8(ಸೇನ್‌ 37, ಆಕಾಶ್‌ 25, ತನುಶ್‌ 3-15)
ಮುಂಬೈ 19.3 ಓವರಲ್ಲಿ 146/7(ಸರ್ಫರಾಜ್‌ 36, ಶ್ರೇಯಸ್‌ 34, ವೈಭವ್‌ 3-27)

ದ.ಆಫ್ರಿಕಾಕ್ಕೆ ಮಾಡು ಇಲ್ಲವೇ ಮಡಿ ಸ್ಥಿತಿ

ಅಡಿಲೇಡ್‌: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿರುವ ದ.ಆಫ್ರಿಕಾ ಭಾನುವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೆದರ್ಲೆಂಡ್‌್ಸ ವಿರುದ್ಧ ಸೆಣಸಾಡಲಿದೆ. ಗುಂಪು 1ರಲ್ಲಿ ಸದ್ಯ 5 ಅಂಕದೊಂದಿಗೆ 2ನೇ ಸ್ಥಾನದಲ್ಲಿರುವ ದ.ಆಫ್ರಿಕಾಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ‍್ಯ. 

ಜಿಂಬಾಬ್ವೆ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ್ದು ದ.ಆಫ್ರಿಕಾವನ್ನು ಈ ಪರಿಸ್ಥಿತಿಗೆ ತಲುಪಿಸಿದೆ. ಬಳಿಕ ಬಾಂಗ್ಲಾದೇಶ ಹಾಗೂ ಭಾರತಕ್ಕೆ ಸೋಲುಣಿಸಿದ್ದ ತಂಡ ನಿರ್ಣಾಯಕ ಘಟ್ಟದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಈ ಪಂದ್ಯದ ಗೆಲುವು ತಂಡದ ಅಳಿವು ಉಳಿವನ್ನು ನಿರ್ಧರಿಸಲಿದೆ. ಮತ್ತೊಂದೆಡೆ ನೆದರ್ಲೆಂಡ್‌್ಸ ಕೇವಲ 2 ಅಂಕ ಸಂಪಾದಿಸಿದ್ದು, ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದೆ. ಜಿಂಬಾಬ್ವೆಗೆ ಸೋಲುಣಿಸಿದ್ದ ತಂಡ ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾತರಿಸುತ್ತಿದೆ.

ಪಂದ್ಯ: ಬೆಳಗ್ಗೆ 5.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.

ಪಾಕಿಸ್ತಾನವನ್ನು ಹೊರದಬ್ಬುತ್ತಾ ಬಾಂಗ್ಲಾ?

ಅಡಿಲೇಡ್‌: ಬದ್ಧವೈರಿ ಭಾರತ ಹಾಗೂ ಬಳಿಕ ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲುಂಡರೂ ಇನ್ನೂ ಸೆಮೀಸ್‌ ರೇಸ್‌ನಲ್ಲಿ ಉಳಿದುಕೊಂಡಿರುವ ಪಾಕಿಸ್ತಾನ, ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಸದ್ಯ ಎರಡೂ ತಂಡಗಳಿಗೆ ಸೆಮೀಸ್‌ ಬಾಗಿಲು ತೆರೆದಿದ್ದು, ಹೀಗಾಗಿ ಉಭಯ ತಂಡಗಳಿಂದಲೂ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. 

ಟೂರ್ನಿಯ ಆರಂಭದಲ್ಲಿ ಪಾಕ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎಂದು ಬಿಂಬಿತವಾಗಿದ್ದರೂ ತಂಡದಿಂದ ನಿರೀಕ್ಷಿತ ಪ್ರದರ್ಶನ ಇನ್ನೂ ಹೊರಬಂದಿಲ್ಲ. ಅತ್ತ ಬಾಂಗ್ಲಾ ಸಂಘಟಿತ ಹೋರಾಟ ಪ್ರದರ್ಶಿಸುತ್ತಿದ್ದರೂ ಗೆಲುವು ದಕ್ಕುತ್ತಿಲ್ಲ. ಆದರೆ ಆಘಾತಕಾರಿ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಬಾಂಗ್ಲಾ, ಪಾಕಿಸ್ತಾನವನ್ನು ಸೋಲಿಸಿ ಟೂರ್ನಿಯಿಂದಲೇ ಹೊರದಬ್ಬಿದರೂ ಅಚ್ಚರಿಯಿಲ್ಲ. ಬಾಂಗ್ಲಾಕ್ಕೂ ಗೆಲುವು ಅನಿವಾರ‍್ಯವಾಗಿರುವ ಕಾರಣ ಪಂದ್ಯ ಕುತೂಹಲ ಸೃಷ್ಟಿಸಿದೆ.

ಪಂದ್ಯ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.