ವಿಶಾಖಪಟ್ಟಣಂ[ನ.11]: ಆರಂಭಿಕ ಆಘಾತದ ಹೊರತಾಗಿಯೂ ದೇವದತ್ ಪಡಿಕ್ಕಲ್ ಅಜೇಯ ಶತಕದ ನೆರವಿನಿಂದ ಆಂಧ್ರ ವಿರುದ್ಧ ಕರ್ನಾಟಕ ತಂಡ 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕರುಣ್ ನಾಯರ್ ಪಡೆ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಈ ಗೆಲುವಿನೊಂದಿಗೆ ಕರ್ನಾಟಕ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಒಟ್ಟು 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮುಷ್ತಾಕ್ ಆಲಿ T20: ದಾಖಲೆ ಬರೆದ ಬೆನ್ನಲ್ಲೇ ಮುಗ್ಗರಿಸಿದ ಕರ್ನಾಟಕ!

ಆಂಧ್ರ ನೀಡಿದ್ದ 185 ರನ್’ಗಳ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಗೌತಮ್ ಹಾಗೂ ಪಡಿಕ್ಕಲ್ ಆಕರ್ಷಕ ಜತೆಯಾಟವಾಡಿದರು. ಅದರಲ್ಲೂ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡುವ ಮೂಲಕ ಪಡಿಕ್ಕಲ್ ಕರ್ನಾಟಕ ಗೆಲುವಿನಲ್ಲಿ  ಪ್ರಮುಖ ಪಾತ್ರವಹಿಸಿದರು. ಕರ್ನಾಟಕದ ಆರಂಭಿಕರಿಬ್ಬರೂ ತಲಾ ಒಂದೊಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ವಿಕೆಟ್’ಗೆ ಜತೆಯಾದ ಕೆ. ಗೌತಮ್ ಹಾಗೂ ಪಡಿಕ್ಕಲ್ ಜೋಡಿ 63 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಗೌತಮ್ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ಕರುಣ್ ನಾಯರ್ 3 ರನ್ ಬಾರಿಸಿ ರನೌಟ್ ಆದಾಗ ಕರ್ನಾಟಕದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಹೋರಾಟ ನಡೆಸಿದ ಪಡಿಕ್ಕಲ್ ಕೇವಲ 60 ಎಸೆತಗಳಲ್ಲಿ 13 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಬಾರಿಸಿದರು. ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಕರ್ನಾಟಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಂಧ್ರ ಎರಡನೇ ಓವರ್’ನಲ್ಲೇ ಕ್ರಾಂತಿ ಕುಮಾರ್ ವಿಕೆಟ್ ಕಳೆದುಕೊಂಡಿತು. ಮಿಥುನ್ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದಿತ್ತರು. ಆದರೆ ಎರಡನೇ ವಿಕೆಟ್’ಗೆ ಅಶ್ವಿನ್ ಹೆಬ್ಬಾರ್-ಪ್ರಶಾಂತ್ ಕುಮಾರ್ 139 ರನ್’ಗಳ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ದಾಪುಗಾಲು ಹಾಕಲು ನೆರವಾದರು. ಹೆಬ್ಬಾರ್ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪ್ರಶಾಂತ್ 79 ರನ್ ಸಿಡಿಸಿ ಕೌಶಿಕ್’ಗೆ ಮೊದಲ ಬಲಿಯಾದರು. ಇದರ ಬೆನ್ನಲ್ಲೇ ರಿಕಿ ಬೊಯಿ ಹಾಗೂ ಶ್ರೀಕಾರ್ ಭರತ್ ಅವರನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಕೌಶಿಕ್ ಯಶಸ್ವಿಯಾದರು.