ಮುಷ್ತಾಕ್ ಅಲಿ ಟ್ರೋಫಿ: ಫೈನಲ್‌ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು, ಬರೋಡಾ ಫೈಟ್
2021ರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಬರೋಡಾ ಪ್ರಶಸ್ತಿಗಾಗಿ ಸೆಣಸಲಿವೆ.
ಅಹಮದಾಬಾದ್(ಜ.30): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್‌ಗೆ ತಮಿಳುನಾಡು ಹಾಗೂ ಬರೋಡಾ ತಂಡಗಳು ಪ್ರವೇಶಿಸಿವೆ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ತಮಿಳುನಾಡು 7 ವಿಕೆಟ್‌ಗಳ ಗೆಲುವು ಸಾಧಿಸಿದರೆ, 2ನೇ ಸೆಮಿಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಬರೋಡಾ 25 ರನ್‌ಗಳ ಜಯ ಪಡೆಯಿತು. ಜ.31ರಂದು ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಬರೋಡಾ ಪ್ರಶಸ್ತಿಗಾಗಿ ಸೆಣಸಲಿವೆ.
ಮೊದಲ ಸೆಮೀಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ತಮಿಳುನಾಡು, ಅರುಣ್ ಕಾರ್ತಿಕ್ (ಅಜೇಯ 89 ರನ್) ಆಕರ್ಷಕ ಆಟದ ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿ ಸತತ 2ನೇ ಬಾರಿಗೆ ಫೈನಲ್‌ಗೇರಿತು.
ಮುಷ್ತಾಕ್ ಅಲಿ ಟ್ರೋಫಿ: ರಾಜಸ್ಥಾನ ಮಣಿಸಿ ಫೈನಲ್‌ಗೇರಿದ ತಮಿಳುನಾಡು
2ನೇ ಸೆಮೀಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡಕ್ಕೆ ನಾಯಕ ಕೇದಾರ್ ದೇವ್‌ಧರ್(64) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಇನ್ನು ಮಧ್ಯಮ ಕ್ರಮಾಂಕಲ್ಲಿ ಕಾರ್ತಿಕ್ ಕಾಕಡೆ(53) ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ಬರೋಡಾ ತಂಡ 3 ವಿಕೆಟ್‌ಗೆ 160 ರನ್ ಗಳಿಸಿತು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಬರೋಡಾ ಬೌಲರ್‌ಗಳು ನಿರಂತರ ಶಾಕ್ ನೀಡಿದರು. ಪ್ರಸಕ್ತ ಆವೃತ್ತಿಯ ಟೂರ್ನಿಯುದ್ದಕ್ಕೂ ಅಜೇಯ ಗೆಲುವಿನ ನಾಗಾಲೋಟ ನಡೆಸಿದ್ದ ಪಂಜಾಬ್‌ಗೆ ಬರೋಡಾ ಶಾಕ್ ನೀಡುವಲ್ಲಿ ಯಶಸ್ವಿಯಾಗಿದೆ. ಪಂಜಾಬ್ ನಾಯಕ ಮನ್ದೀಪ್ ಸಿಂಗ್(42 ರನ್ 24 ಎಸೆತ) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪಂಜಾಬ್ 8 ವಿಕೆಟ್‌ಗೆ 135 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸ್ಕೋರ್:
ರಾಜಸ್ಥಾನ 154/9, ತಮಿಳುನಾಡು 158/3.
ಬರೋಡಾ 160/3, ಪಂಜಾಬ್ 135/8