ಸಿಡ್ನಿ(ಜ.06): ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಬಹುನಿರೀಕ್ಷಿತ 3ನೇ ಟೆಸ್ಟ್‌ ಪಂದ್ಯ ಗುರುವಾರದಿಂದ ಇಲ್ಲಿನ ಸಿಡ್ನಿ ಕ್ರಿಕೆಟ್‌ ಮೈದಾನ (ಎಸ್‌ಸಿಜಿ)ಯಲ್ಲಿ ಆರಂಭಗೊಳ್ಳಲಿದ್ದು, ಉಭಯ ತಂಡಗಳು ಗೆಲುವಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಕಾತರಿಸುತ್ತಿವೆ.

1-1ರಲ್ಲಿ ಸಮಗೊಂಡಿರುವ ಸರಣಿಯಲ್ಲಿ ಮೇಲುಗೈ ಸಾಧಿಸಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಎರಡೂ ತಂಡಗಳು ಎದುರು ನೋಡುತ್ತಿವೆ. ಕೆಲ ಮಹತ್ವದ ಬದಲಾವಣೆಗಳೊಂದಿಗೆ ಭಾರತ ಹಾಗೂ ಆಸ್ಪ್ರೇಲಿಯಾ ಕಣಕ್ಕಿಳಿಯಲಿವೆ.

ಮಧ್ಯಮ ಕ್ರಮಾಂಕದಲ್ಲಿ ರೋಹಿತ್‌?: ಕೆ.ಎಲ್‌.ರಾಹುಲ್‌ ಗಾಯಗೊಂಡು ಹೊರಬಿದ್ದಿರುವ ಕಾರಣ, ಮಯಾಂಕ್‌ ಅಗರ್‌ವಾಲ್‌ಗೆ ಮತ್ತೊಂದು ಸ್ಥಾನ ಸಿಗುವ ಸಾಧ್ಯತೆ ಇದೆ. ಮಯಾಂಕ್‌ ಕಣಕ್ಕಿಳಿದರೆ ಆಗ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಒಂದೊಮ್ಮೆ ಮಯಾಂಕ್‌ರನ್ನು ಹೊರಗಿಟ್ಟು ಹನುಮ ವಿಹಾರಿಗೆ ಮತ್ತೊಂದು ಅವಕಾಶ ಕೊಟ್ಟರೆ, ಶುಭ್‌ಮನ್‌ ಗಿಲ್‌ ಜೊತೆ ರೋಹಿತ್‌ ಆರಂಭಿಕನಾಗಿ ಆಡಲಿದ್ದಾರೆ. ವಿಹಾರಿಯನ್ನೇ ಆರಂಭಿಕನನ್ನಾಗಿ ಆಡಿಸಿ, ರೋಹಿತ್‌ಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ನಾಯಕ ಅಜಿಂಕ್ಯ ರಹಾನೆ ಉತ್ತಮ ಲಯದಲ್ಲಿದ್ದು, ಚೇತೇಶ್ವರ್‌ ಪೂಜಾರರಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗುತ್ತಿದೆ. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಸಹ ಬ್ಯಾಟಿಂಗ್‌ ಲಯ ಕಂಡುಕೊಳ್ಳಲು ಕಾಯುತ್ತಿದ್ದಾರೆ.

ಗಾಯಾಳು ಉಮೇಶ್‌ ಯಾದವ್‌ ಬದಲಿಗೆ ಶಾರ್ದೂಲ್‌ ಠಾಕೂರ್‌ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. 2018ರಲ್ಲಿ ವಿಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಶಾರ್ದೂಲ್‌, ಕೇವಲ 10 ಎಸೆತಗಳನ್ನಷ್ಟೇ ಆಡಿ ಗಾಯಗೊಂಡು ಹೊರಬಿದ್ದಿದ್ದರು. ಶಾರ್ದೂಲ್‌ ಸೇರ್ಪಡೆಗೊಂಡರೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಸಹ ತಕ್ಕಮಟ್ಟಿಗೆ ಬಲಿಷ್ಠಗೊಳ್ಳಲಿದೆ. ಎಡಗೈ ವೇಗಿ ಟಿ.ನಟರಾಜನ್‌ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಟೀಂ ಇಂಡಿಯಾಗೆ ಮತ್ತೊಂದು ಶಾಕ್‌: ಟೆಸ್ಟ್‌ ಸರಣಿಯಿಂದ ಹೊರಬಿದ್ದ ರಾಹುಲ್‌

ವಾರ್ನರ್‌ ಬಲ: ಡೇವಿಡ್‌ ವಾರ್ನರ್‌ ಸಂಪೂರ್ಣ ಫಿಟ್‌ ಆಗದಿದ್ದರೂ ಅವರನ್ನು ಆಡಿಸಲು ಆಸ್ಪ್ರೇಲಿಯಾ ಮುಂದಾಗುತ್ತಿದೆ. ವಾರ್ನರ್‌ ಸೇರ್ಪಡೆ ತಂಡದ ಬಲ ಹೆಚ್ಚಿಸಲಿದೆ. ಆದರೆ ಅಶ್ವಿನ್‌ ವಿರುದ್ಧ ಕಳಪೆ ದಾಖಲೆ ಹೊಂದಿರುವ ವಾರ್ನರ್‌ಗೆ ಮತ್ತೊಮ್ಮೆ ಭಾರತದ ಅಗ್ರ ಸ್ಪಿನ್ನರ್‌ನ ಭೀತಿ ಎದುರಾಗಲಿದೆ. ಇನ್ನು 22 ವರ್ಷದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವಿಲ್‌ ಪುಕೊವ್ಸಿಕ್ ಪಾದಾರ್ಪಣೆ ಮಾಡಲಿದ್ದಾರೆ ಎಂದು ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಖಚಿತಪಡಿಸಿದ್ದಾರೆ. ಹೀಗಾಗಿ ಮ್ಯಾಥ್ಯೂ ವೇಡ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಟ್ರ್ಯಾವಿಸ್‌ ಹೆಡ್‌ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಪಿಚ್‌ ರಿಪೋರ್ಟ್‌: ಎಸ್‌ಸಿಜಿ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡುವ ಸಾಧ್ಯತೆ ಹೆಚ್ಚು. ಸ್ಪಿನ್ನರ್‌ಗಳಿಗೆ ನೆರವು ದೊರೆಯಲಿದ್ದು, ಅಶ್ವಿನ್‌ ಹಾಗೂ ಲಯನ್‌ ನಡುವಿನ ಪೈಪೋಟಿ ಭಾರೀ ಕುತೂಹಲ ಮೂಡಿಸಿದೆ.

ಸಂಭವನೀಯ ತಂಡ:

ಭಾರತ: ಮಯಾಂಕ್‌/ವಿಹಾರಿ, ಗಿಲ್‌, ಪೂಜಾರ, ರಹಾನೆ (ನಾಯಕ), ರೋಹಿತ್‌, ಪಂತ್‌, ಜಡೇಜಾ, ಅಶ್ವಿನ್‌, ಶಾರ್ದೂಲ್‌/ನಟರಾಜನ್‌, ಬೂಮ್ರಾ, ಸಿರಾಜ್‌.

ಆಸ್ಪ್ರೇಲಿಯಾ: ವಾರ್ನರ್‌, ಪುಕೊವ್ಸಿಕ್‌, ಲಬುಶೇನ್‌, ಸ್ಮಿತ್‌, ಹೆಡ್‌/ವೇಡ್‌, ಗ್ರೀನ್‌, ಪೇನ್‌ (ನಾಯಕ), ಕಮಿನ್ಸ್‌, ಸ್ಟಾರ್ಕ್, ಲಯನ್‌, ಹೇಜಲ್‌ವುಡ್‌.

ಪಂದ್ಯ ಆರಂಭ: ಬೆಳಗ್ಗೆ 5ಕ್ಕೆ, 
ನೇರ ಪ್ರಸಾರ: ಸೋನಿ ಸಿಕ್ಸ್‌
ಸೋನಿ ಟೆನ್‌ 2