ಮೆಲ್ಬರ್ನ್‌(ಜ.05): ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಅಭ್ಯಾಸ ನಡೆಸುತ್ತಿದ್ದ ಕನ್ನಡಿಗ ಕೆ. ಎಲ್ ರಾಹುಲ್‌ ಗಾಯಕ್ಕೆ ತುತ್ತಾಗಿದ್ದು, ಉಳಿದೆರಡು ಟೆಸ್ಟ್‌ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಹೌದು, ಮೂರನೇ ಟೆಸ್ಟ್‌ ಪಂದ್ಯ ಆರಂಭಕ್ಕೆ ಕೇವಲ 2 ದಿನಗಳು ಬಾಕಿ ಇರುವಾಗಲೇ ಮಣಿಕಟ್ಟು ನೋವಿಗೆ ತುತ್ತಾಗಿರುವ ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ಕೊನೆ ಎರಡು ಟೆಸ್ಟ್‌ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಕೊನೆಯ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುರಿತಂತೆ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ರಾಹುಲ್ ತಂಡದಿಂದ ಹೊರಬಿದ್ದಿರುವುದು ಭಾರತಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಶನಿವಾರ ಅಭ್ಯಾಸ ನಡೆಸುವ ವೇಳೆ ಕೆ.ಎಲ್. ರಾಹುಲ್ ಎಡ ಮೊಣಕೈ ನೋವಿಗೆ ತುತ್ತಾಗಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಉಳಿದೆರಡು ಪಂದ್ಯಗಳಿಂದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ರಾಹುಲ್‌ ಸಂಪೂರ್ಣ ಫಿಟ್‌ ಆಗಲು ಇನ್ನು ಮೂರು ವಾರಗಳ ಅಗತ್ಯವಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ವಿಚಾರ ಖಚಿತಪಡಿಸಿದೆ.

ಗುಡ್‌ ನ್ಯೂಸ್‌: ಟೀಂ ಇಂಡಿಯಾದ ಯಾರಿಗೂ ಕೊರೋನಾ ಸೋಂಕು ಇಲ್ಲ

ಕೆ.ಎಲ್ ರಾಹುಲ್‌ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರೂ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ರಾಹುಲ್ ಇದುವರೆಗೂ 36 ಟೆಸ್ಟ್‌ ಪಂದ್ಯಗಳನ್ನಾಡಿದ್ದು34.58ರ ಸರಾಸರಿಯಲ್ಲಿ 5 ಶತಕ ಹಾಗೂ 11 ಅರ್ಧಶತಕಗಳ ನೆರವಿನಿಂದ 2006 ರನ್ ಬಾರಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದು, ಇನ್ನೆರಡು ಪಂದ್ಯಗಳು ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.