2026ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಫೈನಲ್‌ಗೆ ಅಹಮದಾಬಾದ್ ಮತ್ತು ಕೊಲಂಬೊ ಎರಡು ಸ್ಥಳಗಳನ್ನು ನಿಗದಿಪಡಿಸಿದೆ. ಪಾಕಿಸ್ತಾನ ತಂಡ ಫೈನಲ್‌ಗೆ ಬಂದರೆ ಪಂದ್ಯ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿ: 2026ರ ಟಿ20 ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ್ದು, ಫೈನಲ್ ಸ್ಥಳದ ಬಗ್ಗೆ ಕುತೂಹಲ ಮೂಡಿಸಿದೆ. ವೇಳಾಪಟ್ಟಿಯಲ್ಲಿ ಫೈನಲ್‌ಗೆ ಎರಡು ಸ್ಥಳಗಳನ್ನು ಉಲ್ಲೇಖಿಸಲಾಗಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಶ್ರೀಲಂಕಾದ ಕೊಲಂಬೊದ ಪ್ರೇಮದಾಸ ಸ್ಟೇಡಿಯಂ ಅನ್ನು ಫೈನಲ್‌ಗೆ ನಿಗದಿಪಡಿಸಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಈ ಮೊದಲೇ ನಿರ್ಧರಿಸಿದ್ದರಿಂದ ಫೈನಲ್‌ಗೆ ಎರಡು ಸ್ಥಳಗಳನ್ನು ಸಿದ್ಧಪಡಿಸಲಾಗುತ್ತಿದೆ. ಪಾಕ್ ತಂಡ ಫೈನಲ್‌ಗೆ ಬಂದರೆ, ಪಂದ್ಯ ಶ್ರೀಲಂಕಾದ ಕೊಲಂಬೊ ಸ್ಟೇಡಿಯಂನಲ್ಲಿ ನಡೆಯಲಿದೆ. ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ ಘಟನೆಗಳ ನಂತರ ಈ ಸಮಸ್ಯೆ ಶುರುವಾಗಿದೆ. ಪಾಕಿಸ್ತಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಭಾರತ ಯುಎಇಯಲ್ಲಿ ಆಡಿತ್ತು. ಇದರ ನಂತರ, ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಡುವುದಿಲ್ಲ ಎಂದು ಪಿಸಿಬಿ ಸಹ ತಿಳಿಸಿತ್ತು. ಇದೇ ಕಾರಣಕ್ಕೆ ಶ್ರೀಲಂಕಾವನ್ನು ಮತ್ತೊಂದು ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಗುಂಪು ಹಂತದ ಭಾರತ-ಪಾಕಿಸ್ತಾನ ಪಂದ್ಯವೂ ಕೊಲಂಬೊದಲ್ಲಿ ನಡೆಯಲಿದೆ.
ಫೆಬ್ರವರಿ 15ರಂದು ಇಂಡೋ-ಪಾಕ್ ಮೊದಲ ಫೈಟ್
ಆತಿಥೇಯ ಮತ್ತು ಹಾಲಿ ಚಾಂಪಿಯನ್ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಆಡಲಿವೆ. ಫೆಬ್ರವರಿ 15 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯು 2026ರ ಫೆಬ್ರವರಿ 7 ರಂದು ಆರಂಭವಾಗಲಿದೆ. ಫೈನಲ್ ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಸೆಮಿಫೈನಲ್‌ಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಲಿವೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಂದು ಕೊಲಂಬೊದಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಕಣಕ್ಕಿಳಿಯುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಪಾಕಿಸ್ತಾನ ಫೈನಲ್‌ಗೆ ತಲುಪಿದರೆ, ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ವಿಜೇತ ನಾಯಕ ಹಾಗೂ ಭಾರತದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ 2026ರ ಟಿ20 ವಿಶ್ವಕಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹತ್ತು ವರ್ಷಗಳ ನಂತರ ಟಿ20 ವಿಶ್ವಕಪ್ ಟೂರ್ನಿಯು ಭಾರತಕ್ಕೆ ಮರಳುತ್ತಿದೆ. ಈ ಹಿಂದೆ 2026ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಚುಟುಕು ವಿಶ್ವಕಪ್ ಟೂರ್ನಿಯು ಆಯೋಜನೆಗೊಂಡಿತ್ತು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗಿ
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಯುಎಇ, ಓಮನ್, ವೆಸ್ಟ್ ಇಂಡೀಸ್, ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಐರ್ಲೆಂಡ್, ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಇಟಲಿ ಮತ್ತು ನೇಪಾಳ ಸೇರಿದಂತೆ ಒಟ್ಟು 20 ತಂಡಗಳು 2026ರ ಐಸಿಸಿ ಟ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.
2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಭಾರತ ತಂಡವು ತವರಿನಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.


