ಟಿ20 ಸರಣಿ: ಶ್ರೀಲಂಕಾ ವಿರುದ್ಧ ಭಾರತ ‘ಸೂಪರ್’ ಕ್ಲೀನ್‌ಸ್ವೀಪ್
ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಭಾರತ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಮಂಗಳವಾರ ಆತಿಥೇಯರ ವಿರುದ್ಧದ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಭಾರತ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ಸರಣಿಯನ್ನು 3-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಗೆಲ್ಲಬಹುದಾದ ಪಂದ್ಯವನ್ನು ಕಳೆದುಕೊಂಡ ಲಂಕಾ ತವರಿನಲ್ಲೇ ವೈಟ್‌ವಾಶ್ ಮುಖಭಂಗಕ್ಕೊಳಗಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ 9 ವಿಕೆಟ್‌ಗೆ 137 ರನ್ ಕಲೆಹಾಕಿತು. 2ನೇ ಓವರಲ್ಲಿ ಶುರುವಾರ ತಂಡದ ಪತನ ಕೊನೆವರೆಗೂ ಮುಂದುವರಿಯಿತು. 8.4 ಓವರ್‌ಗಳಲ್ಲಿ 48 ರನ್ ಗಳಿಸುವಷ್ಟರಲ್ಲೇ ತಂಡದ ಪ್ರಮುಖ 5 ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಜೈಸ್ವಾಲ್ 10, ಸ್ಯಾಮ್ಸನ್ 0, ರಿಂಕು ಸಿಂಗ್ 1, ಸೂರ್ಯಕುಮಾರ್ 0 ಹಾಗೂ ಶಿವಂ ದುಬೆ 13 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಶುಭ್‌ಮನ್ ಗಿಲ್ 39, ರಿಯಾನ್ ಪರಾಗ್ 26, ವಾಷಿಂಗ್ಟನ್ ಸುಂದರ್ 25 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಆರ್‌ಸಿಬಿಗೆ ದೊಡ್ಡ ಶಾಕ್ ಕೊಟ್ಟ ಸ್ಟಾರ್ ಕ್ರಿಕೆಟಿಗ..! ಬೆಂಗಳೂರು ತಂಡ ತೊರೆಯೋದು ಗ್ಯಾರಂಟಿ..?
ಸುಲಭ ಗುರಿ ಬೆನ್ನತ್ತಿದ ಲಂಕಾ ಉತ್ತಮ ಆರಂಭ ಪಡೆದ ಹೊರತಾಗಿಯೂ 8 ವಿಕೆಟ್‌ಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಪಥುಂ ನಿಸ್ಸಾಂಕ 26 ರನ್‌ಗೆ ಔಟಾದರೂ, ಕುಸಾಲ್ ಮೆಂಡಿಸ್(43), ಕುಸಾಲ್ ಪೆರೆರಾ(46) ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಆದರೆ ಕೊನೆ 30 ಎಸೆತಗಳಲ್ಲಿ 30 ರನ್ ಬೇಕಿದ್ದಾದ ಲಂಕಾ ದಿಢೀರ್ ಕುಸಿತ ಕಂಡಿತು. ಸತತ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ತಂಡ ಕೊನೆ 2 ಓವರ್‌ಗಳಲ್ಲಿ 9 ರನ್ ಬೇಕಿದ್ದಾಗಲೂ ಗೆಲ್ಲಲಾಗಲಿಲ್ಲ. ಕೊನೆ ಎಸೆತದಲ್ಲಿ 3 ರನ್ ಬೇಕಿದ್ದಾಗ ವಿಕ್ರಮಸಿಂಘೆ 2 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು.
ಗಂಭೀರ್ ಕೋಚಿಂಗ್, ಸೂರ್ಯ ನಾಯಕತ್ವದಲ್ಲಿ ಭಾರತಕ್ಕೆ ಲಂಕಾ ವಿರುದ್ಧ ಸರಣಿ ಗೆಲುವು
ಸ್ಕೋರ್: ಭಾರತ 20 ಓವರಲ್ಲಿ 137/9 (ಗಿಲ್ 39, ರಿಯಾನ್ 26, ತೀಕ್ಷಣ 3-28), ಶ್ರೀಲಂಕಾ 20 ಓವರಲ್ಲಿ 137/8 (ಪೆರೆರಾ 46, ಮೆಂಡಿಸ್ 43, ರಿಂಕು 2-3, ಸೂರ್ಯ 2-5) ಪಂದ್ಯಶ್ರೇಷ್ಠ: ವಾಷಿಂಗ್ಟನ್
ಹೇಗಿತ್ತು ಸೂಪರ್ ಓವರ್?
ಸೂಪರ್ ಓವರ್‌ನಲ್ಲಿ ಲಂಕಾ ಮಂಕಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ ಕೇವಲ 2 ರನ್ ಗಳಿಸಿತು. ಮೊದಲ ಎಸೆತ ವೈಡ್. ಬಳಿಕ ಕುಸಾಲ್ ಮೆಂಡಿಸ್ ಸಿಂಗಲ್ ರನ್ ಪಡೆದರು. ಆದರೆ ಬಳಿಕ ಸತತ 2 ಎಸೆತಗಳಲ್ಲಿ ಕುಸಾಲ್ ಪೆರೆರಾ ಹಾಗೂ ನಿಸ್ಸಾಂಕರನ್ನು ವಾಷಿಂಗ್ಟನ್ ಸುಂದರ್ ಔಟ್ ಮಾಡಿದರು. ಭಾರತಕ್ಕೆ 3 ರನ್ ಗುರಿ ಲಭಿಸಿತು. ಸೂರ್ಯಕುಮಾರ್ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ತಂಡವನ್ನು ಗೆಲ್ಲಿಸಿದರು.
19, 20ನೇ ಓವರ್‌ಗಳಲ್ಲಿ ರಿಂಕು, ಸೂರ್ಯ ಜಾದೂ!
ಲಂಕಾ ತಂಡಕ್ಕೆ ಕೊನೆ 2 ಓವರ್‌ಗಳಲ್ಲಿ ಕೇವಲ 9 ರನ್ ಬೇಕಿತ್ತು. 6 ವಿಕೆಟ್ ಬಾಕಿ ಉಳಿದಿತ್ತು. 19ನೇ ಓವರಲ್ಲಿ ನಾಯಕ ಸೂರ್ಯ ಚೆಂಡನ್ನು ರಿಂಕು ಸಿಂಗ್ ಕೈಗಿತ್ತರು. ರಿಂಕು ಕೇವಲ 3 ರನ್ ಬಿಟ್ಟುಕೊಟ್ಟಿದ್ದಲ್ಲದೇ ಕುಸಾಲ್ ಪೆರೆರಾ ಹಾಗೂ ರಮೇಶ್ ಮೆಂಡಿಸ್ ವಿಕೆಟ್ ಕಬಳಿಸಿದರು.
ಸಿರಾಜ್‌ರ 1 ಓವರ್ ಬಾಕಿಯಿದ್ದರೂ ಅಚ್ಚರಿಯೆಂಬಂತೆ ಸೂರ್ಯ 20ನೇ ಓವರ್ ಬೌಲ್ ಮಾಡಿದರು. 2 ಮತ್ತು 3ನೇ ಎಸೆತಗಳಲ್ಲಿ ಕ್ರಮವಾಗಿ ಕಮಿಂಡು ಮೆಂಡಿಸ್ ಹಾಗೂ ತೀಕ್ಷಣ ವಿಕೆಟ್ ಪಡೆದರು. ಕೊನೆ 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ 4ನೇ ಎಸೆತದಲ್ಲಿ ಅಶಿತಾ 1, ಕೊನೆ 2 ಎಸೆತಗಳಲ್ಲಿ ವಿಕ್ರಮಸಿಂಘೆ ತಲಾ 2 ರನ್ ಗಳಿಸಿದರು. ಹೀಗಾಗಿ ಪಂದ್ಯ ಟೈ ಆಯಿತು. ಅಂ.ರಾ.ಟಿ20ಯಲ್ಲಿ ರಿಂಕು, ಸೂರ್ಯ ಬೌಲ್ ಮಾಡಿದ್ದು ಇದೇ ಮೊದಲು.