ಐಪಿಎಲ್‌ನ ಆರಂಭಿಕ 2 ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಡೌಟ್!
5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಟೂರ್ನಿಯಲ್ಲಿ ಮಾ.24ರಂದು ಕಳೆದ ಬಾರಿ ರನ್ನರ್-ಅಪ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಮಾ.27ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ನವದೆಹಲಿ(ಮಾ.13): ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್‌ನ ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೂರ್ಯಕುಮಾರ್ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ. ಆದರೆ ಆರಂಭಿಕ 2 ಪಂದ್ಯಗಳಿಗೆ ಲಭ್ಯವಿರುತ್ತಾರೊ ಇಲ್ಲವೊ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಟೂರ್ನಿಯಲ್ಲಿ ಮಾ.24ರಂದು ಕಳೆದ ಬಾರಿ ರನ್ನರ್-ಅಪ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಮಾ.27ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಟೂರ್ನಿ ಆರಂಭಕ್ಕೆ ಇನ್ನೂ 11 ದಿನ ಬಾಕಿ ಇದ್ದರೂ ಸುರ್ಯಕುಮಾರ್ ಮೊದಲೆರಡು ಪಂದ್ಯಗಳಿಗೆ ಲಭ್ಯವಿರುವ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಮೂಲಗಳಿಂದ ತಿಳಿದುಬಂದಿದೆ.
ಫಿಟ್‌ನೆಸ್ ಟೆಸ್ಟ್‌ನಲ್ಲಿ ರಿಷಭ್ ಪಾಸ್: ಐಪಿಎಲ್‌ನಲ್ಲಿ ಕಣಕ್ಕೆ..! ಟಿ20 ವಿಶ್ವಕಪ್‌ಗೂ ಆಯ್ಕೆ?
ಸೂರ್ಯಕುಮಾರ್ ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಮುಂಬೈನ ಯಶಸ್ಸಿನ ಹಿಂದೆ ಸೂರ್ಯಕುಮಾರ್ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಬಾರಿಯೂ ಅವರಿಂದ ತಂಡ ದೊಡ್ಡ ಕೊಡುಗೆ ನಿರೀಕ್ಷಿಸುತ್ತಿದೆ.
ಬಾಂಗ್ಲಾ ಸರಣಿಗೂ ಮುನ್ನ ಶಮಿ ಫಿಟ್: ಜಯ್ ಶಾ ವಿಶ್ವಾಸ
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತದ ತಾರಾ ವೇಗಿ ಮೊಹಮದ್ ಶಮಿ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನ ಟೆಸ್ಟ್ ಸರಣಿಗೂ ಮುನ್ನ ಫಿಟ್ ಆಗುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಶಮಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಬಾಂಗ್ಲಾದೇಶ ವಿರುದ್ಧ ಸರಣಿಗೂ ಮುನ್ನ ಅವರು ಸಂಪೂರ್ಣ ಚೇತರಿಸಿಕೊಳ್ಳಬಹುದು. ಕೆ.ಎಲ್.ರಾಹುಲ್‌ಗೆ ಇಂಜೆಕ್ಷನ್ ಅಗತ್ಯವಿದೆ. ಅವರು ಈಗ ಎನ್‌ಸಿಎನಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ. ಇನ್ನು, ರಿಷಭ್ ಪಂತ್ ಬಗ್ಗೆಯೂ ಜಯ್ ಶಾ ಮಾಹಿತಿ ನೀಡಿದ್ದು, ಪಂತ್ ಟಿ20 ವಿಶ್ವಕಪ್‌ನಲ್ಲಿ ಆಡಿದರೆ ಉತ್ತಮ ಎಂದಿದ್ದಾರೆ.
‘ರಿಷಭ್ ಉತ್ತಮ ಬ್ಯಾಟಿಂಗ್, ಕೀಪಿಂಗ್ ಮಾಡುತ್ತಿದ್ದಾರೆ. ಅವರು ನಮ್ಮ ದೊಡ್ಡ ಆಸ್ತಿ. ಅವರು ಸಂಪೂರ್ಣ ಫಿಟ್ ಆದರೆ ವಿಶ್ವಕಪ್‌ನಲ್ಲೂ ಆಡಬಹುದು. ಐಪಿಎಲ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಗಮನಿಸುತ್ತೇವೆ’ ಎಂದು ಶಾ ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆ ಇಲ್ಲ: ವರದಿ!
ನವದೆಹಲಿ: ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ಭಾರತ ತಾರಾ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿವೆ.
ಕೊಹ್ಲಿ ಟಿ20ಯಲ್ಲಿ ಉತ್ತಮ ಸ್ಟ್ರೈಕ್‌ರೇಟ್ ಹೊಂದಿಲ್ಲ. ಅಲ್ಲದೆ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಅಮೆರಿಕ, ವೆಸ್ಟ್‌ಇಂಡೀಸ್‌ನಲ್ಲಿ ನಿಧಾನಗತಿ ಪಿಚ್‌ಗಳಿರುವ ಹಿನ್ನೆಲೆಯಲ್ಲಿ ಕೊಹ್ಲಿಯನ್ನು ಆಯ್ಕೆ ಮಾಡದೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತ 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ಬರ ನೀಗಿಸಬೇಕೆಂಬುದು ಬಿಸಿಸಿಐ ಆಶಯ. ಇದೇ ಕಾರಣಕ್ಕೆ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮಂಡಳಿ ಮುಂದಾಗಿದೆ ಎನ್ನಲಾಗುತ್ತಿದೆ.