ಉಡುಪಿ ಅರ್ಚಕರು ಆಶೀರ್ವದಿಸಿದ 10 ದಿನಗಳೊಳಗೆ ಟೀಂ ಇಂಡಿಯಾ ಕ್ಯಾಪ್ಟನ್ ಆದ ಸೂರ್ಯಕುಮಾರ್ ಯಾದವ್!
ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ನಾಯಕರಾಗಿ ನೇಮಕವಾಗಿದ್ದಾರೆ. ಉಡುಪಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಸೂರ್ಯ ಪವಾಡಸದೃಶ ರೀತಿಯಲ್ಲಿ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ.
ಬೆಂಗಳೂರು: ಮುಂಬರುವ ಜುಲೈ 27ರಿಂದ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗೆ ಭಾರತದ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕರಾಗಿ ನೇಮಕವಾಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪುನಲ್ಲಿರುವ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು.
ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ 'ಕಾಪು ಮಾರಿಯಮ್ಮನ ದರ್ಶನ ಮಾಡಿದ್ದು ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಇಲ್ಲಿ ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯಿತು. ದೇವಸ್ಥಾನದ ಜೋರ್ಣೋದ್ಧಾರ ಸಂದರ್ಭದಲ್ಲಿ ಇಲ್ಲಿಗೆ ಬರಬೇಕು ಎನ್ನುವ ಇಚ್ಛೆ ಇದೆ" ಎಂದು ಹೇಳಿದ್ದರು.
ಶ್ರೀಲಂಕಾ ಟಿ20 ಸರಣಿಗೆ ಸೂರ್ಯಕುಮಾರ್ ನಾಯಕ, ಏಕದಿನಕ್ಕೆ ಮರಳಿದ ಕೊಹ್ಲಿ-ರೋಹಿತ್
ಇನ್ನು ಇದಕ್ಕೂ ಮುನ್ನ ಹೊಸ ಮಾರಿಗುಡಿ ದೇವಸ್ಥಾನದ ಅರ್ಚಕರು ಮತ್ತೊಮ್ಮೆ ಕಾಪುವಿಗೆ ಬರುವಾಗ ಟೀಂ ಇಂಡಿಯಾ ನಾಯಕರಾಗಿ ಬರುವಂತಾಗಲಿ ಎಂದು ಹಾರೈಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೂರ್ಯ, "ತಂಡದ ನಾಯಕನಾಗುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ದೇಶಕ್ಕಾಗಿ ಆಡುವುದಷ್ಟೇ ನಮ್ಮ ಗುರಿ. ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂದು ಹೇಳಿದ್ದರು.
ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ ಬೆನ್ನಲ್ಲೇ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ಭಾರತದ ಭವಿಷ್ಯದ ಟಿ20 ನಾಯಕ ಯಾರಾಗಬಹುದು ಎನ್ನುವ ಕುತೂಹಲ ಜೋರಾಗಿತ್ತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಟಿ20 ತಂಡದ ನಾಯಕರಾಗುವ ರೇಸ್‌ನಲ್ಲಿದ್ದರು. ಇದರ ಜತೆಗೆ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಹೆಸರು ಕೂಡಾ ನಾಯಕತ್ವ ಹುದ್ದೆಗೆ ಕೇಳಿ ಬರುತ್ತಿತ್ತು.
ಸೂರ್ಯಕುಮಾರ್ ಯಾದವ್ ಇದೇ ಜುಲೈ 09ರಂದು ಉಡುಪಿಯ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅರ್ಚಕರು, ನೀವು ನಾಯಕರಾಗುವಂತಾಗಲಿ ಎಂದು ಹಾರೈಸಿದ್ದರು. ಇದಾಗಿ ಕೇವಲ 10 ತುಂಬುವ ಮುನ್ನವೇ ಅಚ್ಚರಿಯ ರೀತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇದು ಕ್ಷೇತ್ರದ ಮಹಿಮೆ ಎಂದು ಅಭಿಮಾನಿಗಳು ಮಾತನಾಡಲಾರಂಭಿಸಿದ್ದಾರೆ.
ಶ್ರೀಲಂಕಾ ವಿರುದ್ದದ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಖಲೀಲ್ ಅಹಮ್ಮದ್, ಮೊಹಮ್ಮದ್ ಸಿರಾಜ್