ಐಪಿಎಲ್ 2027ರ ಟೂರ್ನಿಗೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮರುನೇಮಕಗೊಂಡಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್ ಯಾದವ್, 'ಲೀಡರ್. ಬ್ರದರ್. ಮೆಂಟರ್' ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಬೆಂಗಳೂರು(ನ.28): ಐಪಿಎಲ್ 2027ರ ಟೂರ್ನಿಗೆ ಮುಂಬೈ ಇಂಡಿಯನ್ಸ್‌ (MI) ತಂಡದ ನಾಯಕನಾಗಿ ರೋಹಿತ್ ಶರ್ಮಾ ಮರುನೇಮಕಗೊಂಡಿದ್ದಾರೆ. ಈ ಮೂಲಕ ಹಲವು ತಿಂಗಳುಗಳಿಂದ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ. ರೋಹಿತ್ ಅವರ ನೇಮಕದ ಬೆನ್ನಲ್ಲೇ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದೇ ಸಾಲಿನ ಸಂದೇಶ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ರೋಹಿತ್ ಶರ್ಮಾ ನಾಯಕತ್ವದ ಘೋಷಣೆಯಾದ ಬೆನ್ನಲ್ಲೇ ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನೀಲಿ ಬಣ್ಣದ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದರು. ಬಳಿಕ ಮತ್ತೊಂದು ಸ್ಟೋರಿಯಲ್ಲಿ ರೋಹಿತ್ ಅವರನ್ನು ಉದ್ದೇಶಿಸಿ, “ಲೀಡರ್. ಬ್ರದರ್. ಮೆಂಟರ್” ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಮುಂಬೈ ಇಂಡಿಯನ್ಸ್‌ ಅಭಿಮಾನಿಗಳನ್ನು ‘ಪಲ್ಟನ್’ ಎಂದು ಕರೆಯುವ ಸೂರ್ಯಕುಮಾರ್, “ಪಲ್ಟನ್, ಕುರ್ಸಿ ಕಿ ಪೇಟಿ ಬಾಂಧ್ ಲೋ” (ಪಲ್ಟನ್, ಸೀಟ್ ಬೆಲ್ಟ್ ಕಟ್ಟಿಕೊಳ್ಳಿ) ಎಂಬ ಸಂದೇಶವನ್ನೂ ನೀಡಿದ್ದಾರೆ. ರೋಹಿತ್ ನಾಯಕತ್ವಕ್ಕೆ ಸೂರ್ಯಕುಮಾರ್ ನೀಡಿರುವ ಈ ಬೆಂಬಲದ ಮಾತುಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ರೋಹಿತ್‌ಗೆ ಮತ್ತೆ ಮುಂಬೈ ನಾಯಕತ್ವ

ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ ತಂಡಕ್ಕೆ ಟ್ರೇಡ್ ಮಾಡಿದ ಬಳಿಕ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಮತ್ತೆ ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದೆ. ಈ ಟ್ರೇಡ್‌ನಲ್ಲಿ ವೇಗಿ ಅರ್ಶದೀಪ್ ಸಿಂಗ್ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕೀರನ್ ಪೊಲಾರ್ಡ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿದ ಬಳಿಕ ನಾಯಕತ್ವದ ಜವಾಬ್ದಾರಿಯನ್ನು ರೋಹಿತ್‌ಗೆ ನೀಡಲಾಗಿದೆ. ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರ ಹೆಸರುಗಳೂ ನಾಯಕತ್ವದ ಆಯ್ಕೆ ವಿಚಾರದಲ್ಲಿ ಚರ್ಚೆಯಲ್ಲಿದ್ದವು. ಆದರೆ, ಐಪಿಎಲ್‌ನಲ್ಲಿ ಐದು ಬಾರಿ ಮುಂಬೈ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟ ಅನುಭವ ಹೊಂದಿರುವ ರೋಹಿತ್ ಅವರಿಗೇ ಫ್ರಾಂಚೈಸಿ ಮಣೆ ಹಾಕಿದೆ.

‘ಮುಂಬೈ ಇಂಡಿಯನ್ಸ್‌ ನನ್ನ ಜೀವನದ ಪ್ರಮುಖ ಭಾಗ’

ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನ 20ನೇ ಆವೃತ್ತಿಗೆ ಸಿದ್ಧನಾಗಿದ್ದು, ತಂಡದ ಅಭಿಮಾನಿಗಳಿಗೆ ಸಂಭ್ರಮದ ಕ್ಷಣಗಳನ್ನು ನೀಡುವುದು ತಮ್ಮ ಗುರಿ ಎಂದು ಹೇಳಿದ್ದಾರೆ. “ಐಪಿಎಲ್‌ನ 20ನೇ ಸೀಸನ್‌ಗೆ, ಮುಂದೆ ಎದುರಾಗಲಿರುವ ಸವಾಲುಗಳಿಗೆ ಮತ್ತು ನಮ್ಮ ಪಲ್ಟನ್ ಅಭಿಮಾನಿಗಳಿಗೆ ಸಂಭ್ರಮಿಸಲು ಸಾಕಷ್ಟು ಕ್ಷಣಗಳನ್ನು ನೀಡಲು ನಾನು ಸಿದ್ಧನಿದ್ದೇನೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದೇ ನಮ್ಮ ಗಮನವಾಗಿರಲಿದೆ,” ಎಂದು ಮುಂಬೈ ಇಂಡಿಯನ್ಸ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ರೋಹಿತ್ ತಿಳಿಸಿದ್ದಾರೆ.

“ಮುಂಬೈ ಇಂಡಿಯನ್ಸ್‌ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಹೆಮ್ಮೆಯ ಸಂಗತಿ. ಮುಂಬರುವ ಋತುವಿನ ಬಗ್ಗೆ ನೀತಾ ಅಂಬಾನಿ ಭಾಭಿ ಮತ್ತು ಆಕಾಶ್ ಅಂಬಾನಿ ಅವರೊಂದಿಗೆ ನಡೆಸಿದ ಮಾತುಕತೆಗಳು ಉತ್ಸಾಹ ಮೂಡಿಸಿವೆ. ನಾವು ಏನನ್ನು ಸಾಧಿಸಬಹುದು ಎಂಬುದರ ಬಗ್ಗೆ ನನಗೆ ಅಪಾರ ನಂಬಿಕೆಯಿದೆ,” ಎಂದು ರೋಹಿತ್ ಹೇಳಿದ್ದಾರೆ.

ರೋಹಿತ್ ನಾಯಕತ್ವದಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್

2013ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ, ಅದೇ ವರ್ಷ ತಂಡಕ್ಕೆ ಮೊದಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿದ್ದರು. ಬಳಿಕ 2015, 2017, 2019 ಮತ್ತು 2020ರಲ್ಲೂ ಮುಂಬೈ ತಂಡ ಚಾಂಪಿಯನ್ ಆಗಿತ್ತು. ಈ ಮೂಲಕ ರೋಹಿತ್ ನಾಯಕತ್ವದಲ್ಲಿ ಮುಂಬೈ ಒಟ್ಟು ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಇದರ ಜೊತೆಗೆ 2013ರಲ್ಲಿ ಮುಂಬೈ ತಂಡ ಚಾಂಪಿಯನ್ಸ್ ಲೀಗ್ ಟಿ20 (CLT20) ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಹೀಗಾಗಿ ರೋಹಿತ್ ನಾಯಕತ್ವದ ಅವಧಿ ಮುಂಬೈ ಇಂಡಿಯನ್ಸ್‌ ಇತಿಹಾಸದ ಅತ್ಯಂತ ಯಶಸ್ವಿ ಕಾಲಘಟ್ಟಗಳಲ್ಲಿ ಒಂದಾಗಿದೆ.

ಆದರೆ, 2020ರಲ್ಲಿ ಕೊನೆಯ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಮುಂಬೈ ತಂಡದ ಪ್ರದರ್ಶನದಲ್ಲಿ ಏರಿಳಿತ ಕಂಡುಬಂತು. 2021ರಲ್ಲಿ ಐದನೇ ಸ್ಥಾನ ಪಡೆದ ತಂಡ, 2022ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವಾದ 10ನೇ ಸ್ಥಾನಕ್ಕೆ ಕುಸಿಯಿತು. 2023ರಲ್ಲಿ ಕ್ವಾಲಿಫೈಯರ್-2ರವರೆಗೆ ತಲುಪಿದರೂ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ 2023ರ ಐಪಿಎಲ್‌ ಮುಗಿದ ಬಳಿಕ ಮುಂಬೈ ತಂಡದ ಆಡಳಿತ ಮಂಡಳಿ ನಾಯಕತ್ವ ಬದಲಾವಣೆಗೆ ಮುಂದಾಯಿತು. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಯಿತು.

ಹಾರ್ದಿಕ್ ನಾಯಕತ್ವದಲ್ಲೂ ಮುಂಬೈಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ:

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 2024ರ ಐಪಿಎಲ್‌ ಆಡಿದ ಮುಂಬೈ ಇಂಡಿಯನ್ಸ್‌ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ದಾಖಲಿಸಿದ ತಂಡ 10 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಂದರೆ 10ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2025ರಲ್ಲಿ ತಂಡದ ಪ್ರದರ್ಶನದಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ 2026ರಲ್ಲಿ ಮತ್ತೆ ತಂಡದ ಪ್ರದರ್ಶನ ಕುಸಿಯಿತು. 14 ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು 10 ಸೋಲುಗಳೊಂದಿಗೆ ಮುಂಬೈ ಇಂಡಿಯನ್ಸ್‌ ಒಂಬತ್ತನೇ ಸ್ಥಾನ ಪಡೆದುಕೊಂಡಿತು.

ರೋಹಿತ್ ನಾಯಕತ್ವದಲ್ಲಿ ಮತ್ತೆ ಟ್ರೋಫಿ ಗೆಲ್ಲುತ್ತಾ ಮುಂಬೈ?

ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ನಾಯಕನನ್ನು ಮತ್ತೆ ಜವಾಬ್ದಾರಿಗೆ ಕರೆತಂದಿರುವ ಮುಂಬೈ ಇಂಡಿಯನ್ಸ್‌ ತಂಡದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಅವರಂತಹ ಪ್ರಮುಖ ಆಟಗಾರರು ರೋಹಿತ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ತಂಡದೊಳಗಿನ ಒಗ್ಗಟ್ಟಿನ ಸಂದೇಶವನ್ನೂ ನೀಡಿದೆ.

Scroll to load tweet…

‘ಲೀಡರ್, ಬ್ರದರ್, ಮೆಂಟರ್’ ಎಂಬ ಸೂರ್ಯಕುಮಾರ್ ಅವರ ಮಾತುಗಳು ರೋಹಿತ್ ಅವರೊಂದಿಗಿನ ಸಂಬಂಧವನ್ನು ಪ್ರತಿಬಿಂಬಿಸುತ್ತವೆ. ಇದೀಗ ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತೆ ಐಪಿಎಲ್ ಟ್ರೋಫಿ ಗೆಲ್ಲುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.