* ರಾಜಸ್ಥಾನ ರಾಯಲ್ಸ್ ವಿರುದ್ದ ಗೆದ್ದು ಬೀಗಿದ ಕೋಲ್ಕತಾ ನೈಟ್ ರೈಡರ್ಸ್* ರಾಯಲ್ಸ್ ಎದುರು 7 ವಿಕೆಟ್‌ ಭರ್ಜರಿ ಗೆಲುವು ದಾಖಲಿಸಿದ ಕೆಕೆಆರ್* ಕೆಕೆಆರ್ ತಂಡವು ಸ್ಟಾರ್ ಆಟಗಾರರನ್ನು ಹೊರಗಿಟ್ಟಿದನ್ನು ಸಮರ್ಥಿಸಿಕೊಂಡ ಸುನಿಲ್ ಗವಾಸ್ಕರ್ 

ಮುಂಬೈ(ಮೇ.03): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಸತತ ಸೋಲುಗಳ ಬಳಿಕ ಕೋಲ್ಕತಾ ನೈಟ್ ರೈಡರ್ಸ್‌ (Kolkata Knight Riders) ತಂಡವು ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ರಾಯಲ್ಸ್‌ (Rajasthan Royals) ಎದುರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಮಹತ್ವದ ಪಂದ್ಯದಲ್ಲಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಕೈಬಿಡುವ ಮೂಲಕ ಕೆಕೆಆರ್ ದಿಟ್ಟ ನಿರ್ಧಾರವನ್ನು ಕೈಗೊಂಡಿತ್ತು. ಇದೀಗ ಈ ಕುರಿತಂತೆ ದಿಗ್ಗಜ ಕ್ರಿಕೆಟಿಗ ಸುನಿಲ್‌ ಗವಾಸ್ಕರ್ (Sunil Gavaskar) ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಫೈನಲ್‌ಗೇರುವಲ್ಲಿ ವೆಂಕಟೇಶ್ ಅಯ್ಯರ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಆದರೆ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರಿರುವ ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟು, ಅವರ ಬದಲಿಗೆ ಅನ್ಕೂಲ್ ರಾಯ್‌ ಅವರಿಗೆ ಕೆಕೆಆರ್ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅನ್ಕೂಲ್ ರಾಯ್ 4 ಓವರ್‌ ಬೌಲಿಂಗ್ ಮಾಡಿ ಕೇವಲ 28 ರನ್ ನೀಡಿ ಪ್ರಮುಖ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ವೆಂಕಟೇಶ್ ಅಯ್ಯರ್‌ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಬಗ್ಗೆ ಗವಾಸ್ಕರ್ ತಮ್ಮ ದಿಟ್ಟ ನಿಲುವು ಪ್ರಕಟಿಸಿದ್ದಾರೆ. ಕೆಕೆಆರ್ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಆದರೆ ವೆಂಕಟೇಶ್ ಅಯ್ಯರ್‌ಗೆ ತಂಡವು ಸಾಕಷ್ಟು ಅವಕಾಶವನ್ನು ಒದಗಿಸಿದೆ. ಕೆಕೆಆರ್ ಆಡಿದ 10 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ವೆಂಕಟೇಶ್ ಅಯ್ಯರ್‌ಗೆ ತಂಡದಲ್ಲಿ ಅವಕಾಶ ನೀಡಿದೆ. ಆದರೆ ವೆಂಕಟೇಶ್ ಅಯ್ಯರ್‌ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಏನೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅವರಿಗೆ ಸೆಕೆಂಡ್‌ ಸೀಸನ್ ಸಿಂಡ್ರೋಮ್‌ ಇರಬಹುದು, ಈ ಕಾರಣಕ್ಕಾಗಿಯೇ ವೆಂಕಟೇಶ್ ಅಯ್ಯರ್ ಅವರನ್ನು ಕೈಬಿಟ್ಟು ಅನ್ಕೂಲ್ ರಾಯ್‌ಗೆ ಕೆಕೆಆರ್ ಮಣೆ ಹಾಕಿದೆ ಎಂದು ಸ್ಟಾರ್ ಸ್ಪೋರ್ಟ್ಸ್‌ ಟಿವಿ ಕಾರ್ಯಕ್ರಮದಲ್ಲಿ ಗವಾಸ್ಕರ್ ಕೆಕೆಆರ್ ತಂಡದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವರ್ಷ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಕೋವಿಡ್ ಭೀತಿ ಎದುರಾಗಿದ್ದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ವೆಂಕಟೇಶ್ ಅಯ್ಯರ್ ಯುಎಇ ಚರಣದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ವೆಂಕಟೇಶ್ ಅಯ್ಯರ್ 10 ಪಂದ್ಯಗಳನ್ನಾಡಿ 41.11ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಅರ್ಧಶತಕ ಸಹಿತ 370 ರನ್ ಬಾರಿಸಿ ಮಿಂಚಿದ್ದರು. ಇನ್ನು ಬೌಲಿಂಗ್‌ನಲ್ಲೂ ಮೂರು ವಿಕೆಟ್‌ ಪಡೆದಿದ್ದರು.

Rinku Singh: ಕಳೆದ 5 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ ಎಂದ ಕೆಕೆಆರ್ ಆಟಗಾರ..!

ಯುಎಇ ಚರಣದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದರಿಂದ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 15ನೇ ಆವೃತ್ತಿಯ ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ವೆಂಕಟೇಶ್ ಅಯ್ಯರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಆದರೆ 2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಇದುವರೆಗೂ ಕೆಕೆಆರ್ ತಂಡದ ಪರ 9 ಪಂದ್ಯಗಳನ್ನು ಆಡಿರುವ ವೆಂಕಟೇಶ್ ಅಯ್ಯರ್ ಕೇವಲ 16.50 ಬ್ಯಾಟಿಂಗ್ ಸರಾಸರಿಯಲ್ಲಿ 132 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಮತ್ತಷ್ಟು ಕಳಪೆ ಪ್ರದರ್ಶನ ತೋರಿರುವ ಅಯ್ಯರ್ ಕೇವಲ 3 ಓವರ್ ಬೌಲಿಂಗ್ ಮಾಡಿ 12.67ರ ಎಕಾನಮಿಯಲ್ಲಿ ರನ್‌ ನೀಡಿದ್ದಾರೆ. ಆದರೆ ಒಂದೇ ಒಂದು ವಿಕೆಟ್ ಕಬಳಿಸಲು ವೆಂಕಟೇಶ್ ಅಯ್ಯರ್ ಯಶಸ್ವಿಯಾಗಿಲ್ಲ.