Rinku Singh: ಕಳೆದ 5 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ ಎಂದ ಕೆಕೆಆರ್ ಆಟಗಾರ..!

* ರಾಜಸ್ಥಾನ ರಾಯಲ್ಸ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್‌

* ಕಕೆಆರ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ರಿಂಕು ಸಿಂಗ್

* 2018ರಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ರಿಂಕು ಸಿಂಗ್ ಇದುವರೆಗೂ ಆಡಿದ್ದು ಕೇವಲ 13 ಪಂದ್ಯ

IPL 2022 I have been waiting for last five years to get a chance Says Rinku Singh kvn

ಮುಂಬೈ(ಮೇ.03): 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಯಲ್ಲಿ ಸತತ 5 ಸೋಲು ಕಂಡು ಕಂಗಾಲಾಗಿದ್ದ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್‌ ರೈಡರ್ಸ್ (Kolkata Knight Riders) ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಬಲಿಷ್ಠ ರಾಜಸ್ಥಾನ ರಾಯಲ್ಸ್‌ (Rajasthan Royals) ಎದುರು ಕೋಲ್ಕತಾ ನೈಟ್ ರೈಡರ್ಸ್‌ ತಂಡವು 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 153 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಂಕು ಸಿಂಗ್ (Rinku Singh) ಮಹತ್ವದ ಪಾತ್ರ ವಹಿಸಿದ್ದರು.

ಈ ಇನಿಂಗ್ಸ್‌ನಲ್ಲಿ ರಿಂಕು ಸಿಂಗ್ ಬ್ಯಾಟಿಂಗ್‌ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್ ಕೇವಲ 23 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 42 ರನ್ ಬಾರಿಸುವ ಮೂಲಕ ಕೆಕೆಆರ್ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ರಿಂಕು ಸಿಂಗ್ ಬ್ಯಾಟ್‌ ಬೀಸಿದ ರೀತಿಯಿಂದಾಗಿಯೇ ಕೆಕೆಆರ್ ತಂಡವು ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಇದರ ಜತೆಗೆ ಸತತ 5 ಸೋಲುಗಳ ಬಳಿಕ ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಯಿತು.

ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರಿಂಕು ಸಿಂಗ್, ತಾವು ಈ ಹಿಂದೆ ಎದುರಿಸಿದ ಸಂಕಷ್ಟಗಳು ಹಾಗೂ ಗಾಯದ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಜತೆಗೆ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಲು ತಾವು ಅವಕಾಶಕ್ಕಾಗಿ ಕಾದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ರಿಂಕು ಸಿಂಗ್ 2018ರಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರೂ ಸಹಾ ಇದುವರೆಗೂ ಕೇವಲ 13 ಐಪಿಎಲ್‌ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಅವಕಾಶಗಳ ಕೊರತೆಯಿಂದಾಗಿ ರಿಂಕು ಸಿಂಗ್ ಐಪಿಎಲ್‌ನಲ್ಲಿ ಆಡಿದ್ದಕ್ಕಿಂತ ಬೆಂಚ್ ಕಾಯಿಸಿದ್ದೇ ಹೆಚ್ಚು.

IPL 2022 ಕೊನೆಗೂ ವಿನ್ನಿಂಗ್ ಟ್ರ್ಯಾಕ್‌ಗೆ ಮರಳಿದ ಕೆಕೆಆರ್, ರಾಜಸ್ಥಾನ ವಿರುದ್ಧ 7 ವಿಕೆಟ್ ಗೆಲುವು

ಆಲಿಘರ್‌ನಿಂದ ಸಾಕಷ್ಟು ಆಟಗಾರರು ರಣಜಿ ಕ್ರಿಕೆಟ್‌ ಆಡಿದ್ದಾರೆ, ಆದರೆ ಆಲಿಘರ್‌ನಿಂದ ಐಪಿಎಲ್‌ ಆಡಿದ ಮೊದಲ ಆಟಗಾರ ನಾನು. ಐಪಿಎಲ್‌ ಒಂದು ದೊಡ್ಡ ಟೂರ್ನಿ, ಹಾಗಾಗಿ ಇಲ್ಲಿ ಸಾಕಷ್ಟು ಒತ್ತಡವಿರುತ್ತದೆ. ಒಳ್ಳೆಯ ಅವಕಾಶಕ್ಕಾಗಿ ನಾನು ಕಳೆದ ಐದು ವರ್ಷಗಳಿಂದ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೆ ಎಂದು ರಿಂಕು ಸಿಂಗ್ ಹೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಎದುರು ರಿಂಕು ಸಿಂಗ್ ಕ್ರೀಸ್‌ಗೆ ಇಳಿದಾಗ ಕೆಕೆಆರ್ ತಂಡವು ಇನ್ನೂ ಆತಂಕದಲ್ಲಿತ್ತು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದ ಬಳಿಕ ರಿಂಕು ಸಿಂಗ್ ಕ್ರೀಸ್‌ಗಿಳಿದರು. ಈ ವೇಳೆ ಕೆಕೆಆರ್ ತಂಡವು ಗೆಲ್ಲಲು ಇನ್ನೂ 61 ರನ್‌ಗಳ ಅಗತ್ಯವಿತ್ತು. ಆದರೆ ನಿತೀಶ್ ರಾಣಾ ಹಾಗೂ ಹಾಗೂ ರಿಂಕು ಸಿಂಗ್ ಭರ್ಜರಿ ಜತೆಯಾಟ ನಿಭಾಯಿಸುವ ಮೂಲಕ ಯಾವುದೇ ಅಪಾಯವಾಗದಂತೆ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. 

ನಾನು ಗಾಯಗೊಂಡ ಬಳಿಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಇದರ ಜತೆಗೆ ದೇಸಿ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದೆ. ನಾನು ಬ್ಯಾಟಿಂಗ್ ಮಾಡುವ ವೇಳೆ ನಿತೀಶ್ ರಾಣಾ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಂ, ಕೊನೆಯವರೆಗೂ ಕ್ರೀಸ್‌ನಲ್ಲಿದ್ದು ಮ್ಯಾಚ್ ಫಿನಿಶ್ ಮಾಡಲು ತಿಳಿಸಿದ್ದರು. ಅದರಂತೆಯೇ ಆಡಿದೆ ಎಂದು ರಿಂಕು ಸಿಂಗ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios