Asianet Suvarna News Asianet Suvarna News

Ind vs Aus ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈ ಪ್ರಶ್ನೆಗೆ ಉತ್ತರ ನೀಡಲಿ: ಸುನಿಲ್ ಗವಾಸ್ಕರ್..!

* ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮೇಲೆ ಸುನಿಲ್ ಗವಾಸ್ಕರ್ ಕಿಡಿ
* ಆಸ್ಟ್ರೇಲಿಯಾ ಎದುರು ಮೊದಲ ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ
* ದೀಪಕ್ ಚಹರ್ ಇದ್ದಂತೆಯೇ ಉಮೇಶ್‌ ಯಾದವ್‌ಗೆ ಸ್ಥಾನ ನೀಡಿದ್ದೇಕೆ ಎಂದ ಸನ್ನಿ

Sunil Gavaskar Wants Team India Management To Answer Why play Umesh Yadav ahead of Deepak Chahar in the 1st T20I kvn
Author
First Published Sep 22, 2022, 5:50 PM IST

ನಾಗ್ಪುರ(ಸೆ.22): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಈಗಾಗಲೇ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆಸೀಸ್‌ ಎದುರಿನ ಸರಣಿಗೂ ಮುನ್ನ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ, ಶಮಿ ಸರಣಿಯಿಂದ ಹೊರಬಿದ್ದಿದ್ದರು. 

ಮೊಹಮ್ಮದ್ ಶಮಿ, ಆಸೀಸ್ ಎದುರಿನ ಸರಣಿಯಿಂದ ಹೊರಬಿದ್ದಿದ್ದರಿಂದ 2019ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ವೇಗಿ ಉಮೇಶ್ ಯಾದವ್‌ಗೆ ಬುಲಾವ್ ನೀಡಲಾಗಿತ್ತು. ಜಸ್ಪ್ರೀತ್ ಬುಮ್ರಾ, ಮೊದಲ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿರದ ಹಿನ್ನೆಲೆಯಲ್ಲಿ ಉಮೇಶ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರನಾಗಿ ಸ್ಥಾನ ಪಡೆದಿರುವ ದೀಪಕ್ ಚಹರ್, ತಂಡದಲ್ಲಿ ಇದ್ದಾಗಿಯೂ ಉಮೇಶ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನೆ ಎತ್ತಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಉಮೇಶ್ ಯಾದವ್ 2 ವಿಕೆಟ್ ಕಬಳಿಸಿದರಾದರೂ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡರು.

ಈ ಕುರಿತಂತೆ ಮಾತನಾಡಿರುವ ಸುನಿಲ್ ಗವಾಸ್ಕರ್, ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದಿರುವ ದೀಪಕ್ ಚಹರ್ ಅವರನ್ನು ಹೊರಗಿಟ್ಟು ಮುಂಬರುವ ವಿಶ್ವಕಪ್ ಟೂರ್ನಿಗೆ ಆಯ್ಕೆಯೇ ಆಗದ ಉಮೇಶ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದರ ಬಗ್ಗೆ ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಉತ್ತರ ನೀಡಬೇಕಿದೆ ಎಂದು ಸ್ಪೋರ್ಟ್ಸ್‌ ಟುಡೆ ಚಾನೆಲ್‌ನಲ್ಲಿ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ದೀಪಕ್ ಚಹರ್ ಕೂಡಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೂ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೂ ಮುನ್ನ ಸೂಕ್ತ ಅಭ್ಯಾಸದ ಅಗತ್ಯವಿದೆ. ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿರುವ ದೀಪಕ್ ಚಹರ್, ಒಂದು ವೇಳೆ 15 ಆಟಗಾರರನ್ನೊಳಗೊಂಡ ತಂಡದ ವೇಗಿಯೊಬ್ಬ ಗಾಯಗೊಂಡರೆ, ದೀಪಕ್ ಚಹರ್ ತಕ್ಷಣ ತಂಡಕೂಡಿಕೊಳ್ಳಲಿದ್ದಾರೆ. ಹೀಗಾಗಿ ಆತನಿಗೆ ಅವಕಾಶ ಸಿಗಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಭುವಿ ಗುಡ್ ಫಿನಿಶರ್: ವೇಗಿ ಭುವನೇಶ್ವರ್ ಬೆಂಬಲಕ್ಕೆ ನಿಂತ ಮ್ಯಾಥ್ಯೂ ಹೇಡನ್

ಹೀಗಾಗಿ ಮುಂದಿನ ಸುದ್ದಿಗೋಷ್ಠಿಯಲ್ಲಿ ಟೀಂ ಮ್ಯಾನೇಜ್‌ಮೆಂಟ್‌, ದೀಪಕ್ ಚಹರ್ ಅವರನ್ನು ಬದಿಗಿಟ್ಟು ಉಮೇಶ್ ಯಾದವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯಕ್ಕೂ ಮುನ್ನ ದೀಪಕ್ ಚಹರ್ ಕೂಡಾ ಗಾಯಗೊಂಡಿದ್ದರೇ ಎನ್ನುವುದರ ಬಗ್ಗೆ ನಮಗಂತೂ ಯಾವುದೇ ಮಾಹಿತಿಯಿಲ್ಲ ಎಂದು ಗವಾಸ್ಕರ್ ಮಾತು ಮುಗಿಸಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 208 ರನ್‌ ಕಲೆಹಾಕಿತಾದರೂ, ಆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ವಿಫಲರಾದರು. ತಂಡದ ಪ್ರಮುಖ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ 4 ಓವರ್ ಬೌಲಿಂಗ್ ಮಾಡಿ 52 ರನ್ ಬಿಟ್ಟುಕೊಟ್ಟರೆ, ಡೆತ್ ಓವರ್‌ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಹರ್ಷಲ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ 49 ರನ್‌ ನೀಡಿದರು. ಈ ಇಬ್ಬರು ವಿಕೆಟ್ ಕಬಳಿಸಲು ವಿಫಲರಾದರು. ಇನ್ನು ಉಮೇಶ್ ಯಾದವ್ ಕೇವಲ 2 ಓವರ್‌ ಬೌಲಿಂಗ್ ಮಾಡಿ 27 ರನ್‌ ನೀಡಿ 2 ವಿಕೆಟ್ ಕಬಳಿಸಿದರು. ಇದೀಗ ಸೆಪ್ಟೆಂಬರ್ 23ರಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

 

Follow Us:
Download App:
  • android
  • ios