ಐಪಿಎಲ್ ಹರಾಜಿನಲ್ಲಿ ಖರೀದಿಯಾದ ನಂತರ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುನಿಲ್ ಗವಾಸ್ಕರ್ ಬಿಸಿಸಿಐಗೆ ಆಗ್ರಹಿಸಿದ್ದಾರೆ. ಬೆನ್ ಡಕೆಟ್ ಮತ್ತು ಹ್ಯಾರಿ ಬ್ರೂಕ್ ಅವರಂತಹ ಆಟಗಾರರ ನಡೆಯಿಂದ ಫ್ರಾಂಚೈಸಿಗಳಿಗೆ ಆಗುವ ನಷ್ಟವನ್ನು ಉಲ್ಲೇಖಿಸಿ, ಕೇವಲ ನಿಷೇಧ ಸಾಲದು, ಕಠಿಣ ಶಿಕ್ಷೆ ಬೇಕೆಂದು ಅವರು ಪ್ರತಿಪಾದಿಸಿದ್ದಾರೆ.

ಮುಂಬೈ: ಐಪಿಎಲ್ ಹರಾಜಿನಲ್ಲಿ ತಂಡಗಳು ಖರೀದಿಸಿದ ನಂತರ, ಕೊನೆ ಕ್ಷಣದಲ್ಲಿ ಹಿಂದೆ ಸರಿಯುವ ವಿದೇಶಿ ಆಟಗಾರರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಡಕ್ ವಾರ್ನಿಂಗ್ ಕೊಟ್ಟ ಗವಾಸ್ಕರ್

ಸದ್ಯಕ್ಕೆ ಹೇರುತ್ತಿರುವ ಎರಡು ವರ್ಷಗಳ ನಿಷೇಧದಿಂದ ಯಾವುದೇ ಪ್ರಯೋಜನವಿಲ್ಲ, ಆಟಗಾರರು ಮರುಚಿಂತನೆ ಮಾಡುವಂತಹ ಕಠಿಣ ಶಿಕ್ಷೆ ಬೇಕು ಎಂದು ಗವಾಸ್ಕರ್ 'ಇಂಡಿಯಾ ಟುಡೇ'ಗೆ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ಕೋಟಿ ರೂಪಾಯಿಗೆ ಖರೀದಿಸಿದ್ದ ಬೆನ್ ಡಕೆಟ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದೇ ಈ ಹೊಸ ಚರ್ಚೆಗೆ ಕಾರಣವಾಗಿದೆ.

"ಕೇವಲ ಎರಡು ವರ್ಷ ಬ್ಯಾನ್ ಮಾಡಿದರೆ ಈ ಚಾಳಿ ನಿಲ್ಲುವುದಿಲ್ಲ. ಮತ್ತೆ ಐಪಿಎಲ್‌ಗೆ ವಾಪಸ್ ಬರುವ ಅವಕಾಶಕ್ಕೇ ಕುತ್ತು ತರುವಂತಹ ಶಿಕ್ಷೆ ಜಾರಿಗೆ ತಂದರೆ ಮಾತ್ರ ಇದು ಕೊನೆಯಾಗುತ್ತದೆ," ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಆಶಸ್ ಸರಣಿ ನಂತರದ ಕೆಲಸದ ಹೊರೆ ಮತ್ತು ವೈಯಕ್ತಿಕ ಕಾರಣಗಳನ್ನು ನೀಡಿ ಡಕೆಟ್ ಹಿಂದೆ ಸರಿದಿದ್ದಾರೆ. ಆದರೆ, 'ದಿ ಹಂಡ್ರೆಡ್' ಟೂರ್ನಿಯಲ್ಲಿ ಉತ್ತಮ ಮೊತ್ತದ ಆಫರ್ ಸಿಕ್ಕಿರುವುದು ಮತ್ತು ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸುವ ನಿರ್ಧಾರವೇ ಡಕೆಟ್ ಈ ರೀತಿ ಮಾಡಲು ಕಾರಣವಾಗಿರಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು, 6.25 ಕೋಟಿ ರೂಪಾಯಿಗೆ ಖರೀದಿಯಾಗಿದ್ದ ಹ್ಯಾರಿ ಬ್ರೂಕ್ ಕೂಡ ಇದೇ ರೀತಿ ಹಿಂದೆ ಸರಿದಿದ್ದರು. ಸದ್ಯದ ಐಪಿಎಲ್ ನಿಯಮದ ಪ್ರಕಾರ, ಗಾಯ ಅಥವಾ ಯಾವುದೇ ವೈದ್ಯಕೀಯ ಕಾರಣಗಳಿಲ್ಲದೆ ಹರಾಜಿನ ನಂತರ ಹಿಂದೆ ಸರಿಯುವ ಆಟಗಾರರಿಗೆ ಎರಡು ಸೀಸನ್‌ಗಳ ನಿಷೇಧ ಹೇರಲಾಗುತ್ತದೆ. ಆದರೆ ಆಟಗಾರರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಗವಾಸ್ಕರ್ ವಾದ.

ಹರಾಜಿನಲ್ಲಿ ತಂತ್ರಗಾರಿಕೆ ರೂಪಿಸಿ ಖರೀದಿಸಿದ ಪ್ರಮುಖ ಆಟಗಾರರು ಹೀಗೆ ಹಿಂದೆ ಸರಿಯುವುದರಿಂದ ತಂಡಗಳ ಸಂಯೋಜನೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಫ್ರಾಂಚೈಸಿಗಳಿಗೆ ಹಣಕ್ಕಿಂತ ಹೆಚ್ಚಾಗಿ, ಒಬ್ಬ ಉತ್ತಮ ಬದಲಿ ಆಟಗಾರನನ್ನು ಹುಡುಕುವುದು ದೊಡ್ಡ ಸವಾಲಾಗುತ್ತದೆ. ಮುಂಬರುವ ಸೀಸನ್‌ಗಳಲ್ಲಿ ಇಂತಹ ಆಟಗಾರರನ್ನು ಹರಾಜಿನಲ್ಲಿ ಖರೀದಿಸುವಾಗ ತಂಡಗಳು ಹೆಚ್ಚು ಜಾಗರೂಕರಾಗಿರಬೇಕು ಎಂದೂ ಗವಾಸ್ಕರ್ ಸಲಹೆ ನೀಡಿದ್ದಾರೆ.

19ನೇ ಸೀಸನ್‌ ಐಪಿಎಲ್‌ಗೆ ಅಧಿಕೃತ ಚಾಲನೆ:

2026ರ ಐಪಿಎಲ್‌ ಟೂರ್ನಿಗೆ ಇದೀಗ ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಜತ್ ಪಾಟೀದಾರ್ ಪಡೆ ಶುಭಾರಂಭ ಮಾಡಿದೆ. ಇದೀಗ ಸೂಪರ್ ಸಂಡೆಯ ಮಹತ್ವದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.