ಹ್ಯಾಂಪ್‌ಶೈರ್ ತಂಡದ ಯುವ ಆಟಗಾರ ಟೋಬಿ ಆಲ್ಬರ್ಟ್, ಎರಡು ಓವರ್‌ಗಳಲ್ಲಿ ತಾವು ಎದುರಿಸಿದ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಅವರು 37 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು, ಮತ್ತು ಅವರ ತಂಡ ಸಸೆಕ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಲಂಡನ್: ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವುದು ಅಪರೂಪದ ಸಾಧನೆ. ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ಅಂತಹ ದಿಗ್ಗಜರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈಗ ಹ್ಯಾಂಪ್‌ಶೈರ್ (Hampshire) ತಂಡದ ಯುವ ಆಟಗಾರ ಟೋಬಿ ಆಲ್ಬರ್ಟ್ (Toby Albert) ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಹೊಸ ಸಂಚಲನ ಮೂಡಿಸಿದ್ದಾರೆ.

2 ಓವರ್‌ಗಳಲ್ಲಿ 6 ಸಿಕ್ಸರ್ ಧಮಾಕಾ!

ಟೋಬಿ ಆಲ್ಬರ್ಟ್ ಅವರ ಈ ಸಾಧನೆ ಸ್ವಲ್ಪ ವಿಭಿನ್ನವಾಗಿದೆ. ಅವರು ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಲಿಲ್ಲ, ಬದಲಾಗಿ ತಾವು ಎದುರಿಸಿದ ಸತತ 6 ಎಸೆತಗಳಲ್ಲಿ ಈ ಸಿಕ್ಸರ್‌ಗಳನ್ನು ಎತ್ತಿದ್ದಾರೆ. ಮೊದಲು ನಾನ್ಟೆಸ್ ಓಸ್ಟ್ಹುಯಿಜೆನ್ ಎಸೆದ ಓವರ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ನಂತರದ ಓವರ್‌ನಲ್ಲಿ ಓಲಿ ಕಿರ್ಟ್ಲಿ ಬೌಲಿಂಗ್ ಮಾಡಲು ಬಂದಾಗ ಆ ಓವರ್‌ನ ಕೊನೆಯ ನಾಲ್ಕು ಎಸೆತಗಳನ್ನು ಸತತವಾಗಿ ಸಿಕ್ಸರ್ ಗೆರೆ ದಾಟಿಸಿದರು. ಈ ಮೂಲಕ ತಾವು ಎದುರಿಸಿದ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಕೀರ್ತಿಗೆ ಪಾತ್ರರಾದರು.

ಟೋಬಿ ಆಲ್ಬರ್ಟ್ ಕೇವಲ 21 ರನ್ ಗಳಿಸಿದ್ದಾಗ ಸಸೆಕ್ಸ್ ತಂಡದ ಫೀಲ್ಡರ್ ಸುಲಭದ ಕ್ಯಾಚ್ ಒಂದನ್ನು ಕೈಬಿಟ್ಟಿದ್ದರು. ಈ ಜೀವದಾನವನ್ನು ಸರಿಯಾಗಿ ಬಳಸಿಕೊಂಡ ಟೋಬಿ, ನಂತರ ಸಸೆಕ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 37 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 5 ಫೋರ್‌ಗಳ ನೆರವಿನಿಂದ ಅಜೇಯ 86 ರನ್ ಚಚ್ಚಿದರು.

ಹ್ಯಾಂಪ್‌ಶೈರ್ ತಂಡಕ್ಕೆ ಜಯ

ಟೋಬಿ ಅವರ ಅಬ್ಬರದ ಜೊತೆಗೆ ಹ್ಯಾಂಪ್‌ಶೈರ್ ತಂಡದ ಆರಂಭಿಕರಾದ ಅಲಿ ಓರ್ (105) ಮತ್ತು ಬೆನ್ ಮೇಸ್ (109) ಶತಕ ಸಿಡಿಸಿ ಮಿಂಚಿದರು. ಇದರಿಂದಾಗಿ ಹ್ಯಾಂಪ್‌ಶೈರ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 383 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಸಸೆಕ್ಸ್ ತಂಡ 332 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಟೋಬಿ ಆಲ್ಬರ್ಟ್ ಈ ಸ್ಫೋಟಕ ಬ್ಯಾಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಬೆರಗಾಗಿದ್ದಾರೆ.

View post on Instagram