ಸಿಡ್ನಿ(ಮಾ.30): ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಆಸ್ಪ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ರನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ನಾಯಕತ್ವದಿಂದ 2 ವರ್ಷ ನಿಷೇಧಗೊಳಿಸಿತ್ತು. ನಿಷೇಧ ಅವಧಿ ಭಾನುವಾರ ಮುಕ್ತಾಯಗೊಂಡಿದ್ದು, ಅವರು ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳಲು ಅರ್ಹರಾಗಿದ್ದಾರೆ. 

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಕ್ರಿಕೆಟ್‌ ಪುನಾರಂಭಗೊಳ್ಳಲಿದ್ದು, ಸ್ಮಿತ್‌ಗೆ ನಾಯಕತ್ವ ನೀಡುವ ನಿರೀಕ್ಷೆ ಇದೆ. ಈ ವರ್ಷ ಐಪಿಎಲ್‌ ನಡೆದರೆ ಸ್ಮಿತ್‌ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಕೊರೋನಾ ಭೀತಿ: ಭಾರತದ ಆಸ್ಪ್ರೇಲಿಯಾ ಪ್ರವಾಸ ಮುಂದೂಡಿಕೆ?

2018ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೊನ್ ಬೆನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಪರಿಣಾಮ ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಗುರಿಯಾದರೆ, ಬೆನ್‌ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. ಆದರೆ ಸ್ಮಿತ್ ನಾಯಕರಾಗದಂತೆ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರು. ಇತ್ತೀಚೆಗಷ್ಟೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸ್ಮಿತ್, ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್‌ನಿಂದಾಗಿ ತಾವು ಮಾನಸಿಕವಾಗಿ ಹಾಗೆಯೇ ದೈಹಿಕವಾಗಿ ಸದೃಢವಾಗಿರಲು ಪ್ರಯತ್ನಿಸುತ್ತಿದ್ದೇನೆ ಎಂದಷ್ಟೇ ತಿಳಿಸಿದ್ದರು. 

ಬಾಲ್ ಟ್ಯಾಂಪರ್‌ನಿಂದಾಗಿ ನಾಲ್ಕು ದಿನ ಗಳಗಳನೆ ಅತ್ತಿದ್ದ ಸ್ಟೀವ್ ಸ್ಮಿತ್

ಸ್ಮಿತ್ ಅನುಪಸ್ಥಿಯಲ್ಲಿ ಟೆಸ್ಟ್ ತಂಡವನ್ನು ಟಿಮ್ ಪೈನೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದರು. ಇನ್ನು ಸೀಮಿತ ಓವರ್‌ಗಳ ತಂಡವನ್ನು ಆರೋನ್ ಫಿಂಚ್ ಮುನ್ನಡೆಸುತ್ತಿದ್ದಾರೆ. ಇದೀಗ ಸ್ಮಿತ್ 2 ವರ್ಷಗಳ ವನವಾಸ ಮುಗಿದಿದ್ದರಿಂದ ಮತ್ತೊಮ್ಮೆ ರೆಡ್ ಬಾಲ್ ಕ್ರಿಕೆಟ್ ನಾಯಕ ಪಟ್ಟ ಅಲಂಕರಿಸುವ ಸಾಧ್ಯತೆಯಿದೆ ಎಂದು ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.