ನವದೆಹಲಿ(ಜ.30): ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಮೂರೂ ಮಾದರಿಯಲ್ಲಿ ಸೆಣಸಲು ಸಜ್ಜಾಗಿದೆ. ಈಗಾಗಲೇ ಚೆನ್ನೈನಲ್ಲಿ ಕ್ವಾರಂಟೈನ್‌ನಲ್ಲಿರುವ ಉಭಯ ತಂಡಗಳು, ಫೆಬ್ರವಿ 5ರಿಂದ ಆರಂಭಗೊಳ್ಳಲಿರುವ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಭಾರತದ ಜನಪ್ರಿಯ ಕ್ರೀಡಾ ಚಾನೆಲ್‌ ಸ್ಟಾರ್‌ ಸ್ಪೋರ್ಟ್ಸ್‍, ಭಾರತ ಹಾಗೂ ಇಂಗ್ಲೆಂಡ್‌ ಸರಣಿಯಲ್ಲಿ ಭರ್ಜರಿ ಹಣ ಸಂಪಾದಿಸಲು ಎದುರು ನೋಡುತ್ತಿದೆ. ಪ್ರತಿಷ್ಠಿತ ಕ್ರೀಡಾ ವೆಬ್‌ಸೈಟ್‌ವೊಂದರ ವರದಿ ಪ್ರಕಾರ ಟೆಸ್ಟ್‌, ಏಕದಿನ ಹಾಗೂ ಟಿ20 ಸರಣಿ (4 ಟೆಸ್ಟ್‌, 5 ಟಿ20, 3 ಏಕದಿನ ಸೇರಿ ಒಟ್ಟು 12 ಪಂದ್ಯಗಳು)ಯಿಂದ ಜಾಹೀರಾತು ಮೂಲಕ 500 ಕೋಟಿ ರುಪಾಯಿ ಗಳಿಸುವ ಗುರಿ ಹೊಂದಿದೆ.

ಅದರಲ್ಲೂ ಟಿ20 ಸರಣಿಗೆ ಹೆಚ್ಚಿನ ಬೇಡಿಕೆಯಿದ್ದು, ಪ್ರತಿ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್‌ ಜಾಹೀರಾತನ್ನು ಸ್ಟಾರ್‌ ವಾಹಿನಿ 7ರಿಂದ 8 ಲಕ್ಷ ರುಪಾಯಿಗೆ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಇಂಗ್ಲಿಷ್‌, ಕನ್ನಡ ಸೇರಿ ಒಟ್ಟು 5 ಭಾಷೆಗಳ ಚಾನೆಲ್‌ಗಳಲ್ಲಿ ಪಂದ್ಯಗಳು ನೇರ ಪ್ರಸಾರವಾಗಲಿವೆ.

ಟೀಂ ಇಂಡಿಯಾ ಕ್ರಿಕೆಟಿಗರ ಕೋವಿಡ್ ಟೆಸ್ಟ್ ರಿಪೋರ್ಟ್ ಔಟ್‌..!

ಇಂಗ್ಲೆಂಡ್‌ನಲ್ಲೂ ಬೇಡಿಕೆ: ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆ ಇಂಗ್ಲೆಂಡ್‌ನ ವಾಹಿನಿಯೊಂದಿಗೆ ಪ್ರಸಾರ ಹಕ್ಕಿನ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಅಲ್ಲಿನ ಪ್ರತಿಷ್ಠಿತ ವಾಹಿನಿಗಳಾದ ಚಾನೆಲ್‌ 4, ಸ್ಕೈ ಸ್ಪೋರ್ಟ್ಸ್ ವಾಹಿನಿಗಳು ಪ್ರಸಾರ ಹಕ್ಕು ಪಡೆಯಲು ಯತ್ನಿಸುತ್ತಿದ್ದು ಏನಿಲ್ಲವೆಂದರೂ 200 ಕೋಟಿ ರು.ಗೆ ಬಿಡ್‌ ಆಗುವ ನಿರೀಕ್ಷೆ ಇದೆ.

ಬೇಡಿಕೆ ಹೆಚ್ಚಲು ಕಾರಣಗಳೇನು?

* ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದು ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ

* ಒಂದು ವರ್ಷದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆಯಲಿದೆ

* 14 ತಿಂಗಳ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿ ಆಡಲಿರುವ ಭಾರತ ತಂಡ

* ತಂಡಕ್ಕೆ ವಾಪಸಾಗಿರುವ ಕೊಹ್ಲಿ, ಉದಯೋನ್ಮುಖ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು

* ಲಂಕಾದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಭರ್ಜರಿ ಲಯದಲ್ಲಿರುವ ಇಂಗ್ಲೆಂಡ್‌