Asianet Suvarna News Asianet Suvarna News

Ind vs Aus T20I: ಮೂರನೇ ಪಂದ್ಯದ ಟಿಕೆಟ್‌ ಖರೀದಿಸಿಲು ಹೈದರಾಬಾದ್‌ನಲ್ಲಿ ನೂಕು ನುಗ್ಗಲು..! ಲಾಠಿ ಚಾರ್ಜ್‌

* ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಹೈದರಾಬಾದ್ ಆತಿಥ್ಯ
* ಟಿಕೆಟ್ ಖರೀದಿಸಲು ಮುಗಿಬಿದ್ದ ಹೈದರಾಬಾದ್ ಕ್ರಿಕೆಟ್ ಫ್ಯಾನ್ಸ್‌
* ಪರಿಸ್ಥಿತಿ ನಿಯಂತ್ರಿಸಲಾಗದೇ ಲಾಠಿ ಚಾರ್ಜ್‌ ಮಾಡಿದ ಪೊಲೀಸರು, ನಾಲ್ವರಿಗೆ ಗಾಯ

Stampede In Hyderabad As Fans Jostle For India vs Australia 3rd T20I Tickets video viral kvn
Author
First Published Sep 22, 2022, 4:57 PM IST

ಹೈದರಾಬಾದ್‌(ಸೆ.22): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿತ್ತು. ಮೊಹಾಲಿಯಲ್ಲಿ ನಡೆದ ಹೈಸ್ಕೋರ್‌ ಗೇಮ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಿದರಷ್ಟೇ ಟಿ20 ಸರಣಿ ಭಾರತದ ಪಾಲಾಗಲಿದೆ. ಹೀಗಾಗಿ ಉಳಿದೆರಡು ಪಂದ್ಯಗಳ ಮೇಲೆ ಸಾಕಷ್ಟು ಕುತೂಹಲ ನೆಟ್ಟಿದೆ. ಎರಡನೇ ಟಿ20 ಪಂದ್ಯ ನಾಗ್ಪುರದಲ್ಲಿ ನಡೆದರೆ, ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಇದೀಗ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಿದ್ದು, ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೈದರಾಬಾದ್‌ನ ಜಿಮ್ಖಾನ ಮೈದಾನದಲ್ಲಿ ದೊಡ್ಡ ಗುಂಪಿನಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಈ ಪೈಕಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮೊದಲಿಗೆ ಇಂದು ಮುಂಜಾನೆಯಿಂದಲೇ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ರೆಡಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಪ್ರವಾಹದ ರೀತಿಯಲ್ಲಿ ಅಭಿಮಾನಿಗಳು ಟಿಕೆಟ್ ಪಡೆದುಕೊಳ್ಳಲು ಜಿಮ್ಖಾನ ಮೈದಾನದತ್ತ ನುಗ್ಗಿದ್ದಾರೆ. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್‌ ಮಾಡಿದ್ದಾರೆ.

ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ತಯಾರಿಯ ಸರಣಿ ಎಂದೇ ಬಿಂಬಿಸಲಾಗುತ್ತಿದೆ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚುಟುಕು ಕ್ರಿಕೆಟ್ ವಿಶ್ವಕಪ್ ಮೇಲೆ ತನ್ನ ಚಿತ್ತ ನೆಟ್ಟಿದೆ. 

ಭುವಿ ಗುಡ್ ಫಿನಿಶರ್: ವೇಗಿ ಭುವನೇಶ್ವರ್ ಬೆಂಬಲಕ್ಕೆ ನಿಂತ ಮ್ಯಾಥ್ಯೂ ಹೇಡನ್

ಸದ್ಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತಕ್ಕೆ ಬಂದಿದ್ದು, ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ(11) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ(02) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ ಆ ಬಳಿಕ ಕೆ ಎಲ್ ರಾಹುಲ್(55), ಸೂರ್ಯಕುಮಾರ್ ಯಾದವ್(46) ಹಾಗೂ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(71*) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಟೀಂ ಇಂಡಿಯಾ 6 ವಿಕೆಟ್‌ ಕಳೆದುಕೊಂಡು 208 ರನ್ ಕಲೆಹಾಕಿತ್ತು. 

ಇನ್ನು ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಮೊದಲ ವಿಕೆಟ್‌ಗೆ 39 ರನ್‌ಗಳ ಜತೆಯಾಟವಾಡಿಕೊಟ್ಟರು. ಆ ಬಳಿಕ ಕ್ಯಾಮರೋನ್ ಗ್ರೀನ್ ಕೇವಲ 30 ಎಸೆತಗಳಲ್ಲಿ 61 ರನ್ ಸಿಡಿಸುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಕೊನೆಯಲ್ಲಿ ಮ್ಯಾಥ್ಯೂ ವೇಡ್ ಅಜೇಯ 45 ರನ್ ಚಚ್ಚುವ ಮೂಲಕ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow Us:
Download App:
  • android
  • ios